ಶ್ರದ್ಥಾಭಕ್ತಿಯಿಂದ ರಂಜಾನ್ ಆಚರಣೆ

ವಿಜಯಪುರ.ಏ೨೩:ಮುಸ್ಲಿಂ ಸಮುದಾಯದವರು ಪವಿತ್ರವಾಗಿ ಆಚರಣೆ ಮಾಡುವಂತಹ ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿದರು.
ಪಟ್ಟಣದ ಎಲ್ಲಾ ಮಸೀದಿಗಳಿಂದ ಮುಸ್ಲಿಂ ಸಮುದಾಯದ ಮುಖಂಡರು ಧರ್ಮಗುರು ಗಳು ಮಾರ್ಗದರ್ಶನದೊಂದಿಗೆ ಅಲ್ಲಾಹುಕ್ಬರ್.. ಎಂಬ ಪ್ರಾರ್ಥನೆ ಯೊಂದಿಗೆ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಪಟ್ಟಣದ ಶಿಡ್ಲಘಟ್ಟ ಕ್ರಾಸ್ ನಲ್ಲಿರುವ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.
ತಲೆಗೆ ಬಿಳಿ ಪಗಡಿ ಧರಿಸಿ, ಶುಭ್ರ ಶ್ವೇತ ವಸ್ತ್ರಧಾರಿಗಳಾಗಿ ಜಮಾಯಿಸಿದ ಮುಸ್ಲಿಮರು, ಲೋಕ ಕಲ್ಯಾಣಕ್ಕಾಗಿ ಅಲ್ಲಾಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಒಂದು ತಿಂಗಳ ರಂಜಾನ್ ಉಪವಾಸದ ವ್ರತವನ್ನು ಅಂತ್ಯಗೊಳಿಸಿದರು.
ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಸೇರಿದ್ದ ಶಿಡ್ಲಘಟ್ಟ ಕ್ರಾಸ್ ನ ಮೈದಾನದ ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ,ಟ್ರಾಫಿಕ್ ಜಾಮ್ ಆಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದ್ವೇಷ, ಅಸೂಯೆ ಮನೋಭಾವನೆ ತ್ಯಜಿಸಿ, ಪರಸ್ಪರ ಪ್ರೀತಿವಿಶ್ವಾಸ ಬೆಳೆಸುವ, ಹಿರಿಯರನ್ನು ಗೌರವಿಸಿ, ಸಮಾನ ವಯಸ್ಕರನ್ನು ಸಹೋದರ ರೀತಿಯಲ್ಲಿ ಕಾಣಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತಿದೆ ಎಂದು ಧರ್ಮಗುರುಗಳು ಸಂದೇಶ ನೀಡಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಮುಸ್ಲಿಂ ಸಮುದಾಯಗಳಿಗೆ ದೇವರು ಒಳ್ಳೆದು ಮಾಡಲಿ. ಶಾಂತಿ ಸೌಹಾರ್ಧತೆಯಿಂದ ಹಬ್ಬ ಆಚರಣೆ ಮಾಡಬೇಕು. ನಿಮ್ಮೆಲ್ಲರ ಕುಟುಂಬಗಳಿಗೆ ಅಲ್ಲಾ ಒಳ್ಳೆಯದು ಮಾಡಲಿ,ಮುಸ್ಲಿಂ ಸಮುದಾಯದವರು ಎಲ್ಲಾ ರಂಗಗಳಲ್ಲೂ ಅಭಿವೃದ್ಧಿಯಾಗಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್, ಬೆಂ.ಗ್ರಾ.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಮಾಜಿ ಉಪಾಧ್ಯಕ್ಷ ಚಿನ್ನಪ್ಪ, ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.