ಶ್ಯಾಗಲೆ ಗ್ರಾಮಕ್ಕೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ

ದಾವಣಗೆರೆ. ಜ.೧೧; ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶ್ಯಾಗಲೇ ಗ್ರಾಮಕ್ಕೆ ಸರ್ಕಾರಿ ಸಾರಿಗೆ ಬಸ್ ಸಂಚಾರ ಕಲ್ಪಿಸಬೇಕೆಂದು ಒತ್ತಾಯಿಸಿ ಆಲ್‌ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಶ್ಯಾಗಲೆ ಗ್ರಾಮದಲ್ಲಿ 
ಖಾಸಗಿ ಬಸ್ ನ ವ್ಯವಸ್ಥೆಯಿದ್ದು ಪ್ರಸ್ತುತ ದಿನಮಾನಗಳಲ್ಲಿ ಖಾಸಗಿ ಸಾರಿಗೆಯ ವೆಚ್ಛ ಅಧಿಕವಾಗಿದೆ. ಶ್ಯಾಗಲೆ, ಲೋಕಿಕೆರೆ, ಯರವನಾಗತಿ ಹಳ್ಳಿ ಕ್ಯಾಂಪ್, ಕೋಲ್ಕುಂಟೆ, ಕಲ್‌ಬಂಡೆ, ತುರ್ಚಗಟ್ಟ, ಬೆಳವನೂರು – ಈ ಎಲ್ಲಾ ಹಳ್ಳಿಯ ಮೂಲಗಳಿಂದ ಬಡ ರೈತ – ಕೂಲಿ ಕಾರ್ಮಿಕರ ಮಕ್ಕಳು ತಮ್ಮ ವಿದ್ಯಾಭಾಸಕ್ಕೆ ದಾವಣಗೆರೆ ನಗರಕ್ಕೆ ಬರುತ್ತಿದ್ದು ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಬಡ ವಿದ್ಯಾರ್ಥಿ- ಕುಟುಂಬಗಳಿಗೆ ತೊಂದರೆ ಆಗುತ್ತಿದೆ. ಓದುವ ಕನಸು ಹೊತ್ತ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಸಾರಿಗೆಯ ತೊಂದರೆಯಗಿ ತಮ್ಮ ಕನಸುಗಳಿಗೆ ಸ್ವತಃ ತಾವೇ ಎಳ್ಳುನೀರು ಬಿಟ್ಟಿದ್ದಾರೆ. ಈ ಸಮಸ್ಯೆಯ ಕುರಿತಾದ ಮನವಿ ಪತ್ರವನ್ನು ಗ್ರಾಮದ ನಾಗರೀಕರು, ವಿದ್ಯಾರ್ಥಿಗಳೆಲ್ಲರೂ ಸೇರಿ ಗ್ರಾಮಪಂಚಾಯಿತಿಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ ದಿನಮಾನಗಳಲ್ಲಿ ಶಾಲಾ- ಕಾಲೇಜುಗಳಿಗೆ ಹೋಗಲು ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆಯೇ ಇಲ್ಲದಂತಾಗಿದೆ. ಒಂದು ದಿನಕ್ಕೆ 60ರೂ.ಖರ್ಚು, ವರ್ಷಕ್ಕೆ 21,900ರೂಗಳು. ಇಷ್ಟು ಖರ್ಚನ್ನು ವ್ಯಯಿಸುವ ಆರ್ಥಿಕ ಸಾಮರ್ಥ್ಯ ಇಲ್ಲದ ಬಡ ಕುಟುಂಬದವರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕಾಗಿರುವುದು ಸಾರ್ವಜನಿಕ ಸೇವಾವಲಯದಲ್ಲಿ ಒಂದಾದ ಸರ್ಕಾರಿ ಸಾರಿಗೆ ಇಲಾಖೆಯ ಜವಾಬ್ದಾರಿಯೆಂದು ಪ್ರತಿಭಟನಾನಿರತರು ಹೇಳಿದರು. ಪ್ರತಿಭಟನೆಯಲ್ಲಿ ಜಿಲ್ಲಾಉಪಾಧ್ಯಕ್ಷೆ ನಾಗಜ್ಯೋತಿ, ಜಂಟಿ ಕಾರ್ಯದರ್ಶಿ ಕಾವ್ಯ, ಸಂಘಟನಾಕಾರರು ಪುಷ್ಪ, ಸ್ವಪ್ನ ಹಾಗೂ ಶ್ಯಾಗಲೇ, ಲೋಕಿಕೆರೆ ಕ್ಯಾಂಪ್, ಲೋಕಿಕೆರೆ  ಗ್ರಾಮದ   ಕಾವೇರಿ, ಕವಿತ, ಶಿಲ್ಪ, ಮಂಜು, ಹೀಗೆ  ಹಲವಾರು ವಿದ್ಯಾರ್ಥಿಗಳು  ಭಾಗವಗಹಿಸಿದ್ದರು.