ಶೌರ್ಯ ಜಾಗರಣ ರಥಯಾತ್ರೆ: ಭವ್ಯ ಶೋಭಾಯಾತ್ರೆ

ಕಲಬುರಗಿ:ಅ. 12: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ಶೌರ್ಯದ ಕುರಿತು ಯುವಕರಲ್ಲಿ ಅರಿವು ಮೂಡಿಸಲು ಹಾಗೂ ದೇಶ ಪ್ರೇಮ ಮೂಡಿಸಲು ಆರಂಭಗೊಂಡಿರುವ ಶೌರ್ಯ ಜಾಗರಣ ರಥಯಾತ್ರೆಯು ನಗರಕ್ಕೆ ಅಕ್ಟೋಬರ್ 13ರಂದು ಆಗಮಿಸಲಿದ್ದು, ಯಾತ್ರೆಗೆ ಬೃಹತ್ ದ್ವಿಚಕ್ರವಾಹನಗಳ ರ್ಯಾಲಿ ಮೂಲಕ ಸ್ವಾಗತಿಸಲಾಗುವುದು. ನಂತರ ಭವ್ಯ ಶೋಭಾಯಾತ್ರೆ ಹಾಗೂ ಯುವ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಬಜರಂಗದಳ ಸೇವಾ ಪ್ರಮುಖ ಶೇಷಾದ್ರಿ ಕುಲಕರ್ಣಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಭಾಗ ಮಟ್ಟದ ರಥಯಾತ್ರೆಗೆ ಅದ್ದೂರಿ ಸ್ವಾಗತದೊಂದಿಗೆ ಇಲ್ಲಿಯೇ ಸಮಾಪ್ತಿಗೊಳ್ಳಲಿದೆ ಎಂದರು.
ದೇಶದೆಲ್ಲೆಡೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಯುವಕರಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಲು ಹಾಗೂ ದೇಶಾಭಿಮಾನ ಮೂಡಿಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ವಿಭಾಗ ಮಟ್ಟದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ರಥಯಾತ್ರೆ ಸಂಚರಿಸುತ್ತಿದೆ. ಕಲಬುರ್ಗಿ ನಗರ ಹಾಗೂ ಗ್ರಾಮಾಂತರ ಜಿಲ್ಲೆ ಎಂದು ಮಾಡಲಾಗಿದ್ದು, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ರಥಯಾತ್ರೆ ಸಂಚರಿಸಿ, ನಗರಕ್ಕೆ ಆಗಮಿಸಿ ಸಮಾಪ್ತಗೊಳ್ಳಲಿದೆ ಎಂದು ಅವರು ಹೇಳಿದರು.
ಶುಕ್ರವಾರದಂದು ಮಧ್ಯಾಹ್ನ 2-30ಕ್ಕೆ ಶೌರ್ಯ ಜಾಗರಣ ರಥಯಾತ್ರೆ ನಗರಕ್ಕೆ ಆಗಮಿಸಲಿದ್ದು, ಶ್ರೀರಾಮ್ ತೀರ್ಥ ಮಂದಿರದ ಬಳಿ ಬೃಹತ್ ದ್ವಿಚಕ್ರವಾಹನಗಳ ರ್ಯಾಲಿ ಮೂಲಕ ಸ್ವಾಗತಿಸಲಾಗುವುದು. ರ್ಯಾಲಿಯು ಯಾತ್ರೆಯು ನಂತರ ಆಳಂದ್ ಚೆಕ್ ಪೋಸ್ಟ್, ಶಹಾಬಜಾರ್ ನಾಕಾ, ಪ್ರಕಾಶ್ ಚಿತ್ರಮಂದಿರ, ಚೌಕ್ ಪ್ರದೇಶಕ್ಕೆ ಬರಲಿದೆ. ಅಲ್ಲಿಂದ ಭವ್ಯ ಶೋಭಾಯಾತ್ರೆ ಆರಂಭಗೊಳ್ಳಲಿದ್ದು, ಜಗತ್ ವೃತ್ತದಿಂದ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟಪಕ್ಕೆ ಬಂದು ಸಮಾರೋಪಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸಂಜೆ 6 ಗಂಟೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಯುವಕರ ಬೃಹತ್ ಸಮಾವೇಶ ಜರುಗಲಿದೆ. ಸಮಾಜ ಚಿಂತಕ ಆದರ್ಶ ಗೋಖಲೆ ಅವರು ಭಾಷಣ ಮಾಡುವರು. ದಿವ್ಯ ಸಾನಿಧ್ಯವನ್ನು ಗುರುಮೂರ್ತಿ ಶಿವಾಚಾರ್ಯರು, ಶಿವಮೂರ್ತಿ ಶಿವಾಚಾರ್ಯರು, ಸದಾಶಿವ್ ಮಹಾಸ್ವಾಮೀಜಿ, ಬಳಿರಾಮ್ ಮಹಾರಾಜರು, ಮರುಳಾರಾಧ್ಯರು ವಹಿಸುವರು. ಮುಖ್ಯ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್‍ನ ಲಿಂಗರಾಜಪ್ಪ ಅಪ್ಪಾ, ಸುಭಾಷ್ ಕಾಂಬಳೆ, ಸುರೇಶ್ ಹೇರೂರ್, ಲಕ್ಷ್ಮಣರಾವ್ ಪೋಲಿಸ್ ಪಾಟೀಲ್, ಪುಂಡಲೀಕ್ ದಳವಾಯಿ, ಬಸವರಾಜ್ ಸುಗೂರ್ ಮುಂತಾದವರು ಆಗಮಿಸುವರು ಎಂದು ಅವರು ಹೇಳಿದರು.
ಜಾಗರಣ ರಥ ಯಾತ್ರೆಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಸರ್ವರೂ ಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ ಮಹಾನಗರ ಜಿಲ್ಲಾಧ್ಯಕ್ಷ ಶ್ರೀಮಂತ್ (ರಾಜು) ನವಲದಿ, ಕಾರ್ಯದರ್ಶಿ ಅಶ್ವಿನಕುಮಾರ್ ಡಿ., ಪ್ರಶಾಂತ್ ಗುಡ್ಡಾ, ಸತೀಶ್ ಮಾವೂರ್, ಶ್ರೀಮಂತ್ ನವಲದಿ, ಶಿವರಾಜ್ ಮುಂತಾದವರು ಉಪಸ್ಥಿತರಿದ್ದರು.