ಶೌಚಾಲಯ ನಿರ್ಮಾಣ : ಸುಮಾರು ೩೫ ಸಾವಿರ ರೂ. ವೆಚ್ಚ

ದೇವದುರ್ಗ.ಸೆ.೦೭- ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡ ಗಬ್ಬೂರಿನ ಯುವ ಬ್ರಿಗೇಡ್ ಸಂಘಟನೆ, ಮತ್ತೊಂದು ಹೆಜ್ಜೆ ಇರಿಸಿದ್ದು ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದೆ.
ಸ್ವಚ್ಛ ಶ್ರಮದಾನ ಅಭಿಯಾನದಡಿ ಪ್ರತಿಭಾನುವಾರ ಸ್ವಚ್ಛತೆ ಕಾರ್ಯ ಮಾಡುತ್ತಿದ್ದು, ೧೫೦ನೇ ಶ್ರಮದಾನ ಅಂಗವಾಗಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಶೌಚಕ್ಕೆ ನೀರಿನ ಸೌಲಭ್ಯ, ಇಂಗು ಗುಂಡಿ ನಿರ್ಮಾಣ, ಪ್ಲಂಬರಿಂಗ್, ಸ್ವಚ್ಛತೆ ಸೇರಿ ವಿವಿಧ ಕೆಲಸ ಕೈಗೊಂಡಿದ್ದಾರೆ.
ಊರ ಮಧ್ಯದಲ್ಲಿರುವ ಶಾಲೆಗೆ ಶೌಚಾಲಯ ನಿರ್ಮಿಸುವಂತೆ ಬಾಲಕಿಯರು ಹಾಗೂ ಶಿಕ್ಷಕರು ಗ್ರಾಪಂಗೆ ಮನವಿ ಮಾಡಿದರೂ ಸ್ಪಂದಿಸಿರಲಿಲ್ಲ. ಯುವ ಬ್ರಿಗೇಡ್ ಒಂದು ಭಾನುವಾರ ಮೀಸಲಿಟ್ಟು ಸುಮಾರು ೩೫ಸಾವಿರ ರೂ. ವೆಚ್ಚದಲ್ಲಿ ಇಟ್ಟಿಗೆ, ಮರಳು, ಸಿಮೆಂಟ್, ರಿಂಗ್ ಸೇರಿ ಪರಿಕರ ಖರೀದಿಸಿ ಶೌಚಗೃಹ ನಿರ್ಮಿಸಿದ್ದಾರೆ. ಶಾಲೆಯಲ್ಲಿ ಸುಮಾರು ೩೫೨ಬಾಲಕಿಯರು ಅಭ್ಯಾಸ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕರೆ ಮೇರೆಗೆ ಪ್ರತಿಭಾನುವಾರ ಸಂಘಟನೆ ಸ್ವಚ್ಛತೆ ಕಾರ್ಯ ಮಾಡುತ್ತಿದೆ. ವಿವಿಧ ದೇವಸ್ಥಾನ, ಬಸ್ ನಿಲ್ದಾಣ, ಸಾರ್ವಜನಿಕ ಉದ್ಯಾನವನ, ಮುಖ್ಯರಸ್ತೆ, ಶಾಲಾ ಆವರಣ, ವಿವಿಧ ಜಾತ್ರೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಿದೆ. ೧೦೦ನೇವಾರ ಸರ್ಕಾರಿ ಶಾಲೆ ಸ್ವಚ್ಛತೆ, ಸುಣ್ಣಬಣ್ಣ ಬಳಿದಿದ್ದರು. ೧೨೫ನೇವಾರ ಶಾಲೆಬಿಟ್ಟ ೧೫ಎಸ್ಸೆಸ್ಸೆಲ್ಸಿ ಮಕ್ಕಳನ್ನು ಶಾಲೆಗೆ ಸೇರಿ ಪರೀಕ್ಷೆ ಬರೆಸಿದ್ದರು. ೧೫೦ನೇ ಶ್ರಮಾದಾನ ಬಾಲಕಿಯರ ಶಾಲೆಗೆ ಶೌಚಾಲಯ ನಿರ್ಮಿಸಿದೆ.
ಸಂಚಾಲಕ ಚನ್ನು ಚಿಕ್ಕಮಠ, ವೀರೇಶ್ ಯಾದವ್, ಮಾರ್ಗದರ್ಶಕರಾದ ಡಾ.ಅಶೋಕ್ ರಾಜಳ್ಳಿ, ಷಣ್ಮುಖ ಹೂಗಾರ್, ರಾಜನಗೌಡ, ರವಿಶುಕ್ಲ, ಉದಯ್ ಕುಮಾರ್, ಕಾರ್ಯಕರ್ತರಾದ ಶರಣಬಸವ, ನಾಗರಾಜ್‌ಗೌಡ, ಬೂದೆಪ್ಪಗೌಡ, ದೇವರಾಜ್, ಜಿಂದವಳಿ, ರವಿ ಭೋವಿ, ಬೂದಿಬಸವ, ಬಾಬು, ವೆಂಕಟೇಶ್, ಪ್ರಭು ಇದ್ದರು.
ಹೂತಿದ್ದ ದೇವಸ್ಥಾನ ತೆರವು
ನಿಜಾಮರ ಆಳ್ವಿಕೆಯಲ್ಲಿ ಮಣ್ಣಲ್ಲಿ ಮುಚ್ಚಿಹೋಗಿದ್ದ ಶ್ರೀಮಹಾಬಲೇಶ್ವರ ದೇವಸ್ಥಾನವನ್ನು ಸಂಘಟನೆ ೧೬ವಾರ ಶ್ರಮದಾನ ಮಾಡಿ ಸ್ವಚ್ಛಗೊಳಿಸಿತ್ತು. ನಮ್ಮ ಊರು ನಮ್ಮ ಹೆಮ್ಮೆ ಧ್ಯೇಯದಿಂದ ಭೂಗತವಾಗಿದ್ದ ದೇವಸ್ಥಾನದಲ್ಲಿದ್ದ ಸುಮಾರು ೧೨೫ಟ್ರಿಪ್, ೯೦೦ಟನ್ ಮಣ್ಣನ್ನು ಹೊರೆತೆಗೆದು ಸ್ವಚ್ಛತೆ ಮಾಡಿದ್ದರು. ಇದರಲ್ಲಿ ವಿದ್ಯಾರ್ಥಿಗಳು ಸೇರಿ ೧೫೦೦ಜನರು ೪೦ಗಂಟೆ ಕೆಲಸ ಮಾಡಿದ್ದರು. ಉದ್ಯಾನವನದಲ್ಲಿ ವೀರಯೋಧರ ಹೆಸರನ್ನು ಗಿಡಕ್ಕೆ ನಾಮಕರಣ ಮಾಡಿ ಸೈನ್ಯ ವನ ಎಂಬ ಹೆಸರಿನಿಂದ ಸ್ವಚ್ಛತೆ ಕೈಗೊಂಡಿದ್ದರು.

ಕೋಟ್====
ಗಬ್ಬೂರು ಯುವ ಬ್ರಿಗೇಡ್ ಹಲವು ಸಮಾಜಮುಖಿ ಕೆಲಸ ಮಾಡುತ್ತಿದೆ. ೨೫, ೫೦, ೧೦೦, ೧೨೫, ೧೫೦ನೇ ಶ್ರಮದಾನ ದಿನ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದೆ. ಸತತ ೧೬ವಾರ ಮಹಾಬಲೇಶ್ವರ ದೇವಸ್ಥಾನ ಸ್ವಚ್ಛತೆ ಮಾಡಿ ಗುಡಿಯನ್ನೇ ಹೊರತೆಗೆದಿದ್ದು ದೊಡ್ಡಮಟ್ಟದ ಕಾರ್ಯಕ್ರಮ. ಇವರಿಗೆ ನಾವು ಅಲ್ಪಸ್ವಲ್ಪ ಸಹಾಯ ಮಾಡುತ್ತಿದ್ದೇವೆ.
ರವಿಶುಕ್ಲ
ಕ್ಷಯರೋಗ ಮೇಲ್ವಿಚಾರಕ, ಮಾರ್ಗದರ್ಶಕ