
ಬಳ್ಳಾರಿ ಡಿ 26 : ಮನೆಗಳಲ್ಲಿ ಶೌಚಗೃಹ ಮತ್ತು ಬಚ್ಚಲುಗುಂಡಿ ನಿರ್ಮಿಸುವುದು ಅಪಶಕುನ ಎಂಬ ನಂಬಿಕೆಯಿಂದ ಅದನ್ನು ವಿರೋಧಿಸಿರುವ ಗ್ರಾಮೀಣ ಪ್ರದೇಶದ ಗರ್ಭಿಣಿಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಜಿಲ್ಲಾ ಪಂಚಾಯ್ತಿ ಆರಂಭಿಸಿದೆ.
ವಿರೋಧ ವ್ಯಕ್ತಪಡಿಸುವ ಗರ್ಭಿಣಿಯರ ಮನೆಗಳಿಗೆ ಆಯಾ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ಅಭಿವೃದ್ಧಿ ಅಧಿಕಾರಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ತಂಡ ಭೇಟಿ ನೀಡುತ್ತಿದೆ. ಗರ್ಭಿಣಿಯರಿರುವ ಮನೆಗಳ ಸದಸ್ಯರಿಗೆ ಅರಿವು ಮೂಡಿಸುತ್ತಿದೆ.
ತಾಲ್ಲೂಕಿನ ಸಂಗನಕಲ್ಲು ಗ್ರಾಮದಲ್ಲಿ ನಿನ್ನೆ ಸಂಚರಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಕ ಅಧಿಕಾರಿ ಮಡಗಿನ ಬಸಪ್ಪ, ಮೌಢ್ಯಾಚರಣೆಯಿಂದ ಗರ್ಭಿಣಿ ಹಾಗೂ ಅವರಿಗೆ ಜನಿಸುವ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಶೌಚಾಲಯ ನಿರ್ಮಿಸುವುದರಿಂದ ಎಲ್ಲರಿಗೂ ಒಳ್ಳೆಯದೇ ಆಗುತ್ತದೆ. ಬಯಲು ಬಹಿರ್ದೆಸೆಗೆ ಹೋಗುವ ಅನಿವಾರ್ಯ ಸನ್ನಿವೇಶವೂ ಇಲ್ಲವಾಗುತ್ತದೆ. ಹೆರಿಗೆಯಾದ ಬಳಿಕವೂ ಶೌಚಗೃಹ- ಬಚ್ಚಲು ಗುಂಡಿ ಅನುಕೂಲಕರವಾಗಿದೆ’ ಎಂದು ಜಾಗೃತಿ ಮೂಡಿಸಿದರು.
ಈ ಮೌಢ್ಯಾಚರಣೆಯೇ ಹಲವು ಗರ್ಭಿಣಿಯರ ಸಾವಿಗೂ ಕೂಡ ಕಾರಣವಾಗಬಹುದು. ಮನೆಯಲ್ಲಿ ಶೌಚಗೃಹ – ಬಚ್ಚಲು ಗುಂಡಿಯಿಲ್ಲದೆ ಬಯಲು ಬಹಿರ್ದೆಸೆಗೆ ಹೋಗುವುದರಿಂದ ಆರೋಗ್ಯದಲ್ಲಿ ಏರುಪೇರಾಗಿ ಸಾವು- ನೋವು ಸಂಭವಿಸುವ ಸಾಧ್ಯತೆಯೂ ಇದೆಂದು ಎಚ್ಚರಿಕೆ ನೀಡಿದರು.
ಶೌಚಾಲಯ ನಿರ್ಮಿಸಿಕೊಳ್ಳುವುದರಿಂದ ಆಗುವ ಅನುಕೂಲಗಳು, ಗೊಡ್ಡು ಸಂಪ್ರ ದಾಯವನ್ನು ಆಚರಿಸುವುದರಿಂದ ಎದುರಾಗುವ ಅಪಾಯಗಳ ಕುರಿತು ಜಿಲ್ಲಾ ಪಂಚಾಯ್ತಿ ನಿರಂತರವಾಗಿ ಜಾಗೃತಿ ಮೂಡಿಸಲಿದೆ’ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದ್ದಾರೆ.