ಶೋಷಿತ ಸಮುದಾಯದ ಏಳಿಗೆಗೆ ನಾನು ಕಟಿ ಬದ್ಧ: ಡಾಹೆಚ್‍ಸಿಎಂ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.18:- ಶತಮಾನಗಳಿಂದ ಸಮಾಜದಲ್ಲಿ ತುಳಿತಕ್ಕೊಳಗಾದವರು ಹಾಗೂ ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸುವ ತುಡಿತ ನನ್ನಲ್ಲಿ ಅಚಲವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೆವಪ್ಪ ಅವರು ಹೇಳಿದರು.
ನಗರದ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ 10 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕೀಯ ಮತ್ತು ಮತಬ್ಯಾಂಕ್ ದೃಷ್ಟಿಯಲ್ಲಿ ನಾನು ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.
ಅಶೋಕಪುರಂ ಎಂದರೆ ಎಲ್ಲಾ ದಲಿತರಿಗೆ ವಿಶೇಷ ಆಸಕ್ತಿ ಮತ್ತು ನಂಬಿಕೆ. ಯಾಕೆಂದರೆ ಇಡೀ ಜಿಲ್ಲೆಗೆ ರಕ್ಷಾಕವಚವಾಗಿದೆ. ಜಾತಿವ್ಯವಸ್ಥೆಯಲ್ಲಿ ಜನರು ತೊಂದರೆ ಅನುಭವಿಸಿದರೆ ಧಾವಿಸುತ್ತಾರೆ. ಅಸಂಖ್ಯಾತ ಯುವಕರು ಇಲ್ಲಿ ವಿದ್ಯಾವಂತರಿದ್ದಾರೆ. ನನಗೂ ಕೂಡ ಆಶೋಕಪುರಂ ಹಾಗೂ ಗಾಂಧಿನಗರವೆಂದರೆ ವಿಶ್ವಾಸವಿದೆ. ಬಸವಲಿಂಗಪ್ಪ, ಬಿ.ರಾಚಯ್ಯ, ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಇಲ್ಲಿಯವರೇ ಆದ ವಿ.ಶ್ರೀನಿವಾಸಪ್ರಸಾದ್ ಅವರಿಗೂ ಅಚ್ಚುಮೆಚ್ಚಿನ ಸ್ಥಳವಾಗಿದೆ ಎಂದರು.
ಇಲ್ಲಿನ ಜನರು ಸ್ವಾಭಿಮಾನದ ಬದುಕು ನಡೆಸಬೇಕು. ಜನರ ಜೀವನಮಟ್ಟ ಸುಧಾರಣೆಯಾಗಬೇಕು, ಯುವಕರಿಗೆ ಒಳ್ಳೆಯ ಭವಿಷ್ಯ ದೊರಕಬೇಕೆಂದು ನಿರಂತರವಾಗಿ ಚಿಂತನೆ ಮಾಡುತ್ತೇನೆ. ಆದರೆ ನಮ್ಮ ಆಸಕ್ತಿಗೆ ತಕ್ಕಂತೆ ಇಲ್ಲಿ ಅಭಿವೃದ್ಧಿಯಾಗಲಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಜೀವನ ಉತ್ತಂಕೇರಿ ಗುಣಮಟ್ಟದ ಬೆಳವಣಿಗೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಅವಧಿಯಲ್ಲಿ ನಗರದ ಹೃದಯ ಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭವನ ನಿರ್ಮಾಣ ಅನೇಕ ಒತ್ತಾಯಗಳಿಂದ ಪ್ರಾರಂಭಿಸಲಾಗಿತು. ಆದರೆ ಹಣಕಾಸಿನ ತೊಂದರೆಯಿಂದ ಕಾಮಗಾರಿ ನೆನಗುದಿಗೆ ಬಿದ್ದಿತ್ತು. ಬಳಿಕ ಸಮುದಾಯದ ಪರ ಮಾತನಾಡುವ ನಾಯಕರು ಯಾರೂ ಕಾಮಗಾರಿ ಬಗ್ಗೆ ಗಮನಹರಿಸಲಿಲ್ಲ. ಆದರೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾನು ಸಚಿವನಾಗಿ ಕಾಮಗಾರಿಯನ್ನು ಮುಂದುವರೆಸಲು ಸಚಿವ ಸಂಪುಟದಲ್ಲಿಟ್ಟು 19 ಕೋಟಿಯನ್ನು ಮಂಜೂರು ಮಾಡಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಶೋಕಪುರಂ ಜನರು ಕೇಳಿದ ಎಲ್ಲಾ ಅಭಿವೃದ್ಧಿಗೆ ಸಮ್ಮತಿ ನೀಡಿದ್ದೇನೆ. ಅನೇಕ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಇಲ್ಲಿನ ಜನರ ಏಳಿಗೆಗಾಗಿ ನಾನು ಕಟಿಬದ್ದನಿದ್ದೇನೆ. ಜಿಲ್ಲಾಮಟ್ಟದ ಅಧಿಕಾರಿಗಳನ್ನು ನನ್ನೊಟ್ಟಿಗೆ ಕರೆದು ಜನಸಂಪರ್ಕ ಸಭೆ ನಡೆಸಿ, ನಿಮ್ಮ ಕುಂದುಕೊರತೆಯನ್ನು ಆಲಿಸಲಾಗುವುದು. ಎಲ್ಲರೂ ಒಗ್ಗಟ್ಟಾಗಿ ಸರ್ಕಾರದ ಸವಲತ್ತು ಪಡೆಯಬೇಕು. ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಮಾಡಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಿ.ನರಸೀಪುರ ಕ್ಷೇತ್ರ ಕೆ.ಡಿ.ಪಿ ಸದಸ್ಯರಾದ ಸುನೀಲ್ ಬೋಸ್, ಕೆ.ಪಿ.ಸಿ.ಸಿ ವಕ್ತಾರ ಎಂ.ಲಕ್ಷ್ಮಣ್, ಮಾಜಿ ಮೇಯರ್ ಪುರುಷೋತ್ತಮ್, ಆದಿ ಕರ್ನಾಟಕ ಮಹಾಸಂಸ್ಥೆಯ ಅಧ್ಯಕ್ಷ ಸುನೀಲ್, ಉಪಾಧ್ಯಕ್ಷ ಶಿವಸ್ವಾಮಿ, ನಗರ ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಪೆÇ್ರ.ಪಿ.ವಿ.ನಂಜರಾಜ ಅರಸ್, ಮುಖಂಡರಾದ ಈಶ್ವರ್, ರೇವಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.