ಶೋಷಿತ ಸಮುದಾಯದಿಂದ ಈ ದೇಶದ ಚರಿತ್ರೆ ನಿರ್ಮಾಣ – ಡಾ.ದಳವಾಯಿ.

ಕೂಡ್ಲಿಗಿ.ಅ. 5 :-   ತಳಸಮುದಾಯದ ಬೇಡ,ಬೆಸ್ತರಿಂದ ರಾಮಾಯಣ,ಮಹಾಭಾರತ ಮಹಾಕಾವ್ಯಗಳು ರಚನೆಯಾಗಿದ್ದು ಈ ದೇಶದ ಚರಿತ್ರೆ ಶೋಷಿತ ಸಮುದಾಯಗಳಿಂದ ಪ್ರಾರಂಭವಾಗುತ್ತದೆ ಎಂದು ಹಂಪಿ  ಕನ್ನಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.                                                                                                                 ಅವರು ಪಟ್ಟಣದ ಪ್ರವಾಸಿಮಂದಿರದಲ್ಲಿ ವಿಜಯನಗರ ಜಿಲ್ಲಾ ವಾಲ್ಮೀಕಿ ಸಂಘ ಕಾರ್ಯಕ್ರಮದ  ಉದ್ಘಾಟನೆ ನೆರವೇರಿಸಿ ಮಾತನಾಡುತ್ತ  ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮತ್ತು ಗಾಂಧೀಜಿ  ಅವರ ಗುರಿ ಒಂದೇ ಆಗಿದ್ದು ಅವರು ಸಾಗಿದ ಮಾರ್ಗಗಳು ಮಾತ್ರ ಬೇರೆ ಬೇರೆಯಾಗಿದ್ದವು. ಗಾಂಧೀಜಿ  ಎಲ್ಲಾ ಇದ್ದರೂ ಜನಸಾಮಾನ್ಯರ ಜೊತೆ ಬದುಕಿ ಬಾಳುವ ಮೂಲಕ ಇಡೀ ಜಗತ್ತಿಗೆ ಮಾದರಿಯಾದರೆ ಅಂಬೇಡ್ಕರ್ ಅವರು ತಾವು ಅನುಭವಿಸಿದ ನೋವು, ಶೋಷಣೆ ವಿರುದ್ದ  ಹೋರಾಟ ಮಾಡಿ ದಲಿತರು ಸಹ ಕೋಟ್ ಹಾಕಬಹುದು, ಉನ್ನತ ವಿಧ್ಯಾಭ್ಯಾಸ ಮಾಡಬಹುದು ಎಂದು ತೋರಿಸಿಕೊಡುವ ಮೂಲಕ ಶೋಷಿತರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿದರು.  ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸುವ ಮೂಲಕ ಇಡೀ ಜಗತ್ತಿನ ಧ್ವನಿಯಾಗಿ ಬೆಳಕಾದರು ಎಂದರು. ಇಂದಿನ ಶೋಷಿತ ಸಮುದಾಯದ ಯುವಪೀಳಿಗೆ ತಮ್ಮ ತಮ್ಮಲ್ಲಿಯೇ ವೈಷಮ್ಯ, ಬಡಿದಾಟ ಬಿಟ್ಟು ಉನ್ನತ ವಿಧ್ಯಭ್ಯಾಸದ ಮೂಲಕ ಧ್ವನಿ ಇಲ್ಲದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಮೂಲಕ ಈ ದೇಶದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡುವ ಕಾರ್ಯ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು. 
 ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ  ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಅಮರೇಶ ಯತಗಲ್  ಮಾತನಾಡಿ ವಿಜಯನಗರ ಸಾಮ್ರಾಜ್ಯದ ನಂತರ ಕನ್ನಡ ನಾಡಿನಲ್ಲಿ ನಾಯಕ ಅರಸು ಮನೆತನಗಳು ಅಸ್ಥಿತ್ವಕ್ಕೆ ಬಂದಿದ್ದು  77 ಪಾಳೆಪಟ್ಟುಗಳ ಕೊಡುಗೆ ಅಮೂಲ್ಯವಾದದ್ದು ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಬೇಡರ ಹೋರಾಟದ ರೋಚಕ ಇತಿಹಾಸವನ್ನು ಎಂದಿಗೂ ಮರೆಯಲಾಗದು ಎಂದುತಿಳಿಸಿದರು 
ಕರ್ನಾಟಕದ ನಾಯಕ ಅರಸು ಮನೆತನಗಳ ಕುರಿತು ಮಾತನಾಡುತ್ತ  ಹಲಗಲಿಯ ಬೇಡರು, ಸುರಪುರದ ವೆಂಕಟಪ್ಪನಾಯಕ, ಮೊಂಡುಗೈ ವೆಂಕಟಪ್ಪನಾಯಕ ಸೇರಿದಂತೆ ಹಲವಾರು ಪಾಳೆಗಾರರು ಬ್ರಿಟೀಷರು ವಿರುದ್ದ ಹೋರಾಟ ಮಾಡಿ ಕನ್ನಡನಾಡಿನ ಚರಿತ್ರೆಯಲ್ಲಿ ರೋಚಕ ಇತಿಹಾಸವನ್ನು ಸೃಷ್ಠಿಮಾಡಿದ್ದಾರೆ, ಚಿತ್ರದುರ್ಗ, ಜರ್ಮಲಿ, ಗುಡೇಕೋಟೆ, ವೀರನದುರ್ಗ, ಹರಪನಹಳ್ಳಿ ಪಾಳೆಗಾರರು ಬಳ್ಳಾರಿ,  ಚಿತ್ರದುರ್ಗ ಜಿಲ್ಲೆಗಳಲ್ಲಿ ಆಳ್ವಿಕೆ ಮಾಡಿದ್ದು ಇವರ ಇತಿಹಾಸ ಇಂದಿನ ಯುವಪೀಳೆಗೆಗೆ  ಆದರೆ ಇಂದು ಮಕ್ಕಳ ಪಠ್ಯದಲ್ಲಿ ಬೇಡರ ಇತಿಹಾಸ ತಿರುಚುವ ಕೆಲಸ ನಡೆಯುತ್ತಿರುವುದು ವಿಪರ್‍ಯಾಸ ಎಂದರು. ಶೌರ್ಯಕ್ಕೆ ಹೆಸರುವಾಸಿಯಾದ ಬೇಡರು ಬಹುತೇಕ ಸಾಮ್ರಾಜ್ಯಗಳಲ್ಲಿ ಸೈನಿಕರಾಗಿ ಸೇವೆ ಮಾಡುವುದರ ಮೂಲಕ  ಈ ದೇಶದ ಚರಿತ್ರೆಯಲ್ಲಿ ಅಳಿಸಲಾಗದ ಸಾಧನೆ ಮಾಡಿದ್ದಾರೆ ಆದರೆ ಈ ಬಗ್ಗೆ ವಾಸ್ತವ ಇತಿಹಾಸ ತಿರುಚುವುದು ಈ ದೇಶದ ಚರಿತ್ರೆಗೆ ಬಗೆಯುವ ದ್ರೋಹವಾಗಿದೆ ಎಂದರು. ಕನ್ನಡ ನಾಡಿನಲ್ಲಿ ಆಳ್ವಿಕೆ ನಡೆಸಿದ ಪಾಳೆಗಾರರ ರೋಚಕ ಇತಿಹಾಸವನ್ನು ಎಳೆಎಳೆಯಾಗಿ ನೆರೆದಿದ್ದ ಯುವಕರಿಗೆ ತಿಳಿಸುವ ಮೂಲಕ ಯುವಕರಿಗೆ ಇತಿಹಾಸ ಪ್ರe ಬೆಳೆಸಿದರು.
   ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿಂಕಲ್ ನಾಗಮಣಿ ಅಧ್ಯಕ್ಷತೆವಹಿಸಿದ್ದರು. ನೂತನ ವಿಜಯನಗರ ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಎಂ.ಎಚ್.ಬಸವರಾಜ ಪ್ರಾಸ್ತವಿಕವಾಗಿ ಮಾತನಾಡಿದರು.  ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಜಿ.ಸತ್ಯಪ್ಪ, ರಾಜ್ಯ ಪತ್ರಕರ್ತರ ಸಂಘದ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ,  ಕೂಡ್ಲಿಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಭೀಮಣ್ಣ ಗಜಾಪುರ, ಪ.ಪಂ.ಸದಸ್ಯ ಕೆ.ಈಶಣ್ಣ, ದಲಿತ ಮುಖಂಡ ಎಸ್.ದುರುಗೇಶ್, ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳಾದ  ಮಾಳ್ಗಿ ಮಂಜುನಾಥ, ಬಿ.ಹರೀಶ್, ಸಿರಿಬಿ ನಿತೀಶ, ಜಿ.ಎಸ್.ಸತೀಶ್, ಸಿ.ಗಜೇಂದ್ರ, ಎಂ.ಎಚ್.ವೆಂಕಟೇಶ್  ಮುಂತಾದವರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕಿ ಚೌಡಮ್ಮ ಪ್ರಾರ್ಥಿಸಿದರು. ಗುಪ್ಪಾಲ್ ಕೊಟ್ರೇಶ್ ನಿರೂಪಿಸಿದರು.