ಶೋಷಿತರ ಮೀಸಲು ಕಸಿಯುತ್ತಿರುವ ಮೋದಿ: ಸಿದ್ದು

ದೇವದುರ್ಗ.ಜ.೧೩- ಸಾಮಾಜಿಕವಾಗಿ ಹಿಂದುಳಿದ ಹಾಗೂ ಶೋಷಣೆಗೊಳಪಟ್ಟ ಕೆಲವರ್ಗದ ಜನರಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಮೀಸಲು ಜಾರಿಗೊಳಿಸಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮೇಲ್ವರ್ಗದವರನ್ನು ಖುಷಿಪಡಿಸಲು ಅವರು ಕೇಳದೆಯೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.೧೦ ಮೀಸಲು ಕಲ್ಪಿಸಿ ಸಂವಿಧಾನ ಉಲ್ಲಂಘನೆ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಮೇಲ್ವರ್ಗದ ಜನರು ಹೋರಾಟ ಮಾಡಿಲ್ಲ, ಮೀಸಲಾತಿ ಕೇಳಿಲ್ಲ, ಯಾವುದೇ ಶೋಷಣೆ ಅನುಭವಿಸಿಲ್ಲ. ಆದರೆ ಅವರನ್ನು ಓಲೈಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಶೇ.೧೦ ಮೀಸಲಾತಿ ಕಲ್ಪಿಸುವ ಮೂಲಕ ಸಂವಿಧಾನದ ಆಶಯಕ್ಕೆ ಧಕ್ಕೆತಂದಿದ್ದಾರೆ.
ಮೀಸಲಾತಿ ಪ್ರಮಾಣ ಶೇ.೫೦ ಮೀರಬಾರದು ಎಂದು ಸುಪ್ರೀಂಕೋರ್ಟ್ ೧೯೯೨ರಲ್ಲಿ ಆದೇಶ ನೀಡಿದೆ. ಅಲ್ಲದೆ ಸಂವಿಧಾನದಲ್ಲೂ ಮೇಲ್ವರ್ಗಕ್ಕೆ ಮೀಸಲು ಕಲ್ಪಿಸಲು ಅವಕಾಶವಿಲ್ಲ. ಆದರೆ ಮೋದಿಯವರು ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲಾತಿ ಕಲ್ಪಿಸಿದ್ದಾರೆ. ಈ ಹಿಂದೆ ಶೇ.೪೯.೫ಮೀಸಲು ಇತ್ತು. ರಾಜ್ಯ ಸರ್ಕಾರ ಎಸ್ಸಿಗೆ ಶೇ.೨, ಎಸ್ಟಿಗೆ ಶೇ.೪ ಪಸೆಂಟ್ ಹೆಚ್ಚಳ ಮಾಡಿದೆ. ಕೇಂದ್ರ ಶೇ.೧೦ ಮೀಸಲು ನೀಡಿದ್ದು ಒಟ್ಟಾರೆ ಮೀಸಲು ಪ್ರಮಾಣ ಶೇ.೬೫ಕ್ಕೆ ಹೆಚ್ಚಾಗಿದೆ. ಇದು ಸುಪ್ರೀಂಕೋರ್ಟ್ ಆದೇಶ ಸ್ಪಷ್ಟ ಉಲ್ಲಂಘನೆಯಾಗಿದೆ.
ಕೊಡಗು ಭಾಗದ ಕುರುಬರಿಗೆ ಎಸ್ಟಿ ಮೀಸಲು ಕಲ್ಪಿಸಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ ಭಾಗದ ಗೊಂಡಗಳಿಗೆ ನನ್ನ ಅವಧಿಯಲ್ಲಿ ಎಸ್ಸಿ ಸೌಲಭ್ಯ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇನೆ. ಸಿಎಂ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ ಕುರುಬರನ್ನ ಎಸ್ಟಿಗೆ ಸೇರಿಸುವುದಾಗಿ ಹೋರಾಟದ ನಾಟಕ ಆಡುತ್ತಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಮಾತೆತ್ತಿದರೆ ಧಮ್ ಇದಿಯಾ, ತಾಕತ್ ಇದೆಯಾ ಎನ್ನುತ್ತಾರೆ. ತಮ್ಮ ತಾಕತ್ತು, ತಮ್ಮನ್ನು ಪ್ರಧಾನಿ ನರೇಂದ್ರ ಮೋದಿ ಮುಂದೆ ತೋರಿಸುವ ಮೂಲಕ ಕುರುಬರನ್ನು ಎಸ್ಟಿಗೆ ಸೇರಿಸುವ ಕೆಲಸವನ್ನು ಮಾಡಬೇಕು. ಈಶ್ವರಪ್ಪ ಡೋಂಗಿತನವನ್ನು ಬಿಟ್ಟು ಮೋದಿ ಬಳಿ ಕುರುಬರ ಬಗ್ಗೆ ಮೀಸಲಾತಿ ಕೇಳಲಿ ಎಂದು ಆಗ್ರಹಿಸಿದರು
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಎಂಎಲ್ಸಿ ಎಚ್.ವಿಶ್ವನಾಥ್, ಮಾಜಿ ಸಚಿವ ರೇವಣ್ಣ, ಪೀಠಾಧಿಪತಿ ಶ್ರೀಸಿದ್ದರಾಮಯ್ಯನಂದಪುರಿ, ಕಾಗಿನೆಲೆ ಕನಕ ಗುರುಕುಲದ ಶ್ರೀನಿಜಾನಂದ ಪುರಿ ಸ್ವಾಮೀಜಿ ಇತರರಿದ್ದರು.