ಶೋಷಿತರ ಅಭಿವೃದ್ಧಿಗೆ ಶ್ರಮಿಸಿದ ಸುಧಾರಣಾವಾದಿ ಬಾಬೂಜಿ

ಹುಬ್ಬಳ್ಳಿ, ಏ 6: ಡಾ. ಬಾಬು ಜಗಜೀವನರಾಂ ಅವರು ದಿಟ್ಟ ರಾಜಕಾರಣಿ ಮಾತ್ರವಲ್ಲದೇ, ಸಾರ್ವಜನಿಕ ಸೇವೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟ, ಶೋಷಿತರ, ದೀನ ದಲಿತರ ಶ್ರೇಯೋಭಿವೃದ್ಧಿಗೆ ಅವಿರತ ಶ್ರಮಿಸಿದ ಅದ್ವಿತೀಯ ಸಾಮಾಜಿಕ ಸುಧಾರಣಾವಾದಿ, ಕ್ರಾಂತಿಕಾರಿ ಸಮಾಜ ಸುಧಾರಕರು ಹಾಗೂ ಮಹಾ ಮಾನವತಾವಾದಿಯೂ ಆಗಿದ್ದರು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 114ನೇ ಜಯಂತಿ ಅಂಗವಾಗಿ ಸೋಮವಾರ ಇಲ್ಲಿನ ಇಂದಿರಾ ಗಾಜಿನ ಮನೆ ಆವರಣದಲ್ಲಿನ ಡಾ. ಬಾಬೂಜೀ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಪ್ರಥಮ ಪ್ರಧಾನಿ ಚಾಚಾ ನೆಹರು ಅವರು ಪಂಚವಾರ್ಷಿಕ ಯೋಜನೆಗಳ ಜನಕರಾದರೆ, ಹಸಿರು ಕ್ರಾಂತಿಯ ಜನಕ ಡಾ. ಬಾಬು ಜಗಜೀವನರಾಂ ಅವರಾಗಿದ್ದಾರೆ. ಕೃಷಿಯಿಂದ ರಾಷ್ಟ್ರದ ಆರ್ಥಿಕ ಪ್ರಗತಿ ಸಾಧ್ಯ ಎಂದು 1965ರಲ್ಲೇ ಬಾಬುಜೀ ಅವರು ಹೇಳಿದ್ದರು. ಕೃಷಿಗೆ ಉತ್ತೇಜನ ನೀಡುವುದರಿಂದ ದೇಶದಲ್ಲಿ ಸ್ವಾವಲಂಭಿಗಳು ಜನ್ಮತಾಳಿದರೆ, ಬಂಡವಾಳಶಾಹಿಗಳಿಂದ ಗುಲಾಮರು ಸೃಷ್ಠಿಯಾಗುತ್ತಾರೆ ಎಂದಿದ್ದರು. ಆದರೆ, ಆಳುತ್ತಿರುವ ಇಂದಿನ ಸರ್ಕಾರಗಳು ಫಲವತ್ತಾದ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಅರ್ಪಿಸಿ, ಅವರಿಂದಲೇ ದೇಶದ ಆರ್ಥಿಕ ಪ್ರಗತಿ ಸಾಧ್ಯ ಎಂಬಂತೆ ಬಿಂಬಿಸುತ್ತ ಕೃಷಿಕರಿಗಿಂತ ಹೆಚ್ಚಾಗಿ ಬಂಡವಾಳಶಾಹಿಗಳಿಗೆ ಉತ್ತೇಜನ ನೀಡುತ್ತಿರುವುದು ದುರ್ದೈವದ ಸಂಗತಿ ಎಂದರು.
ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ದೇಶದ 2 ಕಣ್ಣುಗಳಿದ್ದಂತೆ. ಜಗಜೀವನರಾಂ ಅವರೂ ಸಹ ಅಂಬೇಡ್ಕರ್ ಅವರಂತೆ ಶಿಕ್ಷಣ, ಭೂಮಿ, ಆರೋಗ್ಯ ರಾಷ್ಟ್ರೀಕರಣವಾಗಬೇಕು ಎಂಬ ಆಶಯ ಹೊಂದಿದ್ದರು. ಹರಿಜನ ಸೇವಾ ಸಂಘ ಸ್ಥಾಪಿಸಿ ಶೋಷಿತರ-ಹರಿಜನರ ಧನಿಯಾಗಿ, ಅವರ ಹಕ್ಕುಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡಿದ ಅವರು, ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ಅಸ್ಪøಶ್ಯತೆ ನಿರ್ಮೂಲನೆಗಾಗಿ ಅವಿರತ ಶ್ರಮಿಸಿದ ಧೀಮಂತ ನಾಯಕರಾಗಿದ್ದಾರೆ. ಈ ಇಬ್ಬರು ಮಹಾನಾಯಕರ ಚಿಂತನೆಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಿ ಶೋಷಿತ ಸಮುದಾಯದ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಅಬ್ಬಯ್ಯ ಹೇಳಿದರು.
ಪಾಲಿಕೆ ಮಾಜಿ ಸದಸ್ಯರಾದ ಗಣೇಶ ಟಗರಗುಂಟಿ, ಯಮನೂರು ಜಾಧವ, ಯಮನೂರು ಗುಡಿಹಾಳ, ವಿಜುನಗೌಡ ಪಾಟೀಲ, ಮುಖಂಡರಾದ ಪ್ರಭು ಪ್ರಭಾಕರ, ಇಮ್ರಾನ್ ಎಲಿಗಾರ, ಶ್ರೀನಿವಾಸ ಬೆಳದಡಿ, ಪರಶುರಾಮ ಕಾಳೆ, ಗಂಗಾಧರ ದೊಡವಾಡ, ನಿರಂಜನ ಹಿರೇಮಠ, ಪ್ರಸನ್ನ ಮಿರಜಕರ್, ಶ್ರೀಶೈಲ, ಶರೀಫ್ ಅದವಾನಿ, ಮಂಜು ಉಪ್ಪಾರ, ವಾದಿರಾಜ ಕುಲಕರ್ಣಿ, ವೀರಣ್ಣ ಹಿರೇಹಾಳ, ಲತೀಫ್ ಶರಬತ್ತವಾಲೇ, ಅಬ್ಬು ಬಿಜಾಪುರ, ಇತರರು ಇದ್ದರು.