(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೫- ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ವಿರೋಧ ಪಕ್ಷದ ನಾಯಕರಾಗಿ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇಮಕವಾಗುವುದು ಬಹುತೇಕ ಖಚಿತ.
ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ನಿನ್ನೆ ಪಕ್ಷದ ಕೇಂದ್ರ ವೀಕ್ಷಕರುಗಳಾದ ಮನ್ಸುಕ್ ಮಾಂಡವೀಯ, ವಿನೋದ್ ತಾವಡೆ ಇವರುಗಳು ಬಿಜೆಪಿಯ ಎಲ್ಲ ಶಾಸಕರು, ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿ ಪಕ್ಷದ ವರಿಷ್ಠರಿಗೆ ವರದಿ ನೀಡಿದ್ದರು. ಈ ವರದಿ ಆಧರಿಸಿ ಪಕ್ಷದ ವರಿಷ್ಠರು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ಹಾಗೆಯೇ ವಿರೋಧ ಪಕ್ಷದ ನಾಯಕರಾಗಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ನಿಯುಕ್ತಿಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳಿವೆ.
ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡುವ ಸಂಬಂಧ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಅವರ ಜತೆ ಚರ್ಚಿಸಿದ್ದು, ಮೋದಿ ಅವರು ಸಹ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗುವುದು ಬಹುತೇಕ ನಿಶ್ಚಿತ.ಇಂದು ಸಂಜೆಯೊಳಗೆ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಶೋಭಾ ಕರಂದ್ಲಾಜೆ ಹಾಗೂ ವಿರೋಧ ಪಕ್ಷದ ನಾಯಕನಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರನ್ನು ವರಿಷ್ಠರು ದೆಹಲಿಯಿಂದ ಪ್ರಕಟಿಸಲಿದ್ದಾರೆ.ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಳೆದು ತೂಗಿ, ಬಿಜೆಪಿ ವರಿಷ್ಠರು ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷರಾಗಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.ಲೋಕಸಭಾ ಚುನಾವಣೆ ಹತ್ತಿರವಾಗಿರುವಾಗ ಪಕ್ಷವನ್ನು ಹೆಚ್ಚು ಆಕ್ರಮಣಕಾರಿಯಾಗಿ ಮುನ್ನಡೆಸಲು ಶೋಭಾ ಕರಂದ್ಲವಾಜೆ ಮತ್ತು ಬಸನಗೌಡಪಾಟೀಲ್ ಯತ್ನಾಳ್ ನೇಮಕ ಸೂಕ್ತ ಎಂಬ ಹಿನ್ನೆಲೆಯಲ್ಲಿ ವರಿಷ್ಠರು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.ಪಕ್ಷದ ವೀಕ್ಷಕರು ನಿನ್ನೆ ರಾಜ್ಯಕ್ಕೆ ಬಂದಿದ್ದ ಸಂದರ್ಭದಲ್ಲಿ ಹಲವು ಶಾಸಕರು ಪಕ್ಷವನ್ನು ಮುನ್ನಡೆಸಲು ಆಕ್ರಮಣಕಾರಿ ನಾಯಕನ ಅಗತ್ಯವಿದೆ. ಹಾಗಾಗಿ ವಿರೋಧ ಪಕ್ಷದ ನಾಯಕರಾಗಿ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಆಯ್ಕೆ ಮಾಡಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಾಗೆಯೇ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಬಗ್ಗೆಯೂ ಸಹ ಒಲವು ತೋರಿದ್ದರು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ವರಿಷ್ಠರು ಎಲ್ಲರ ಅಭಿಪ್ರಾಯದಂತೆ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲು ತೀರ್ಮಾನ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಬಿಜೆಪಿಯ ನೂತನ ಅಧ್ಯಕ್ಷರಾಗಿ ನೇಮಕಗೊಳ್ಳಲಿರುವ ಶೋಭಾ ಕರಂದ್ಲಾಜೆ ಅವರು ಈ ಹಿಂದೆ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ರಾಜ್ಯದಲ್ಲಿ ಸಚಿವರಾಗಿ ಕೆಲಸ ಮಾಡಿರುವ ಅನುಭವ ಇದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಸಂಸದರಾದ ನಂತರ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಕೃಷಿ ಖಾತೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದು, ಪ್ರಧಾನಿ ಮೋದಿ ಅವರು ಮೆಚ್ಚುಗೆಗೆ ಕಾರಣವಾಗಿತ್ತು. ಜತೆಗೆ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲೂ ಅವರು ಪಕ್ಷದ ಉಸ್ತುವಾರಿಯಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಶೋಭಾ ಕರಂದ್ಲಾಜೆ ಅವರನ್ನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕ ಮಾಡಲು ಒಪ್ಪಿಗೆ ನೀಡಿದ್ದಾರೆ.ಹಾಗೆಯೇ ಆಕ್ರಮಣಕಾರಿ ಮನೋಭಾವದ ಯಾವ ಮುಲಾಜು, ದಾಕ್ಷಿಣ್ಯಕ್ಕೆ ಒಳಗಾಗದ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿರೋಧ ಪಕ್ಷದ ನಾಯಕರಾಗುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇವರಿಬ್ಬರ ಆಯ್ಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿದ್ದಾರೆ ಎನ್ನಲಾಗಿದೆ.
ಇಂದೇ ನಿರ್ಧಾರ
ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಶಾಸಕಾಂಗಪಕ್ಷದ ನಾಯಕನ ಸ್ಥಾನಕ್ಕೆ ಇಂದೇ ವರಿಷ್ಠರು ಹೆಸರುಗಳನ್ನು ಅಂತಿಮಗೊಳಿಸುವರು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕನ ಆಯ್ಕೆ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಬಂದಿದ್ದ ಪಕ್ಷದ ವರಿಷ್ಠರು ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ವೀಕ್ಷಕರು ಎಲ್ಲರ ಅಭಿಪ್ರಾಯ ಕ್ರೂಢೀಕೃತ ವರದಿಯವನ್ನು ಪಕ್ಷದ ವರಿಷ್ಠರಿಗೆ ನೀಡಿದ್ದು ಇಂದು ಸಂಜೆಯೊಳಗೆ ವರಿಷ್ಠರು ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರನ್ನು ಪ್ರಕಟಿಸಲಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಪ್ರಧಾನಿ ಮೋದಿ ಅವರ ಜತೆ ಚರ್ಚೆ ನಡೆಸಿ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ಬಗ್ಗೆ ತೀರ್ಮಾನ ಮಾಡಲಿದ್ದಾರೆ. ಸಂಜೆಯೊಳಗೆ ಅಧಿಕೃತವಾಗಿ ಘೋಷಣೆಯೂ ಆಗಲಿದೆ ಎಂದು ಅವರು ಹೇಳಿದರು.
ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಚರ್ಚೆಗೆ ಯಾವಾಗ ಅವಕಾಶ ಸಿಗುತ್ತೆ ಎನ್ನುವುದರ ಮೇಲೆ ಸದನದಲ್ಲಿ ಧರಣಿ ಮುಂದುವರೆಸಬೇಕೋ, ಬೇಡವೋ ಎಂಬುದನ್ನು ತೀರ್ಮಾನಿಸಲಾಗುವುದು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೊಂಡಾಟ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್‌ನವರು
ಗ್ಯಾರಂಟಿಯನ್ನು ಮನೆ ಮನೆಗೆ ತಲುಪಿಸಿಯೇ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೀಗಿರುವಾಗ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಯಾವುದೇ ಷರತ್ತುಗಳಿಲ್ಲದೆ ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.