ಶೋಧ ಕಾರ್ಯಕ್ಕೆ ಹಡಗಿನ ಕೊರತೆ – ಲಿಂಗಸೂಗೂರಿನಿಂದ ಎರವಲು

ತುಂಗಭದ್ರಾ ನದಿ ಪ್ರವಾಹಕ್ಕೆ ಸಿಕ್ಕ ಅರ್ಚಕ : ೬ ದಿನವಾದರೂ ಸಿಗದ ಶವ
ರಾಯಚೂರು.ಜು.೨೧- ಸಿಂಧನೂರು ತಾಲೂಕಿನ ಮುಕುಂದ ಗ್ರಾಮದಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ಅರ್ಚಕ ಶವ ಪತ್ತೆ ಕಾರ್ಯಾಚರಣೆಗೆ ಅಗತ್ಯವಾದ ಹಡಗು ಇಲ್ಲದ ಪರಿಸ್ಥಿತಿಯಲ್ಲಿ ಲಿಂಗಸೂಗೂರು ತಾಲೂಕಿನಿಂದ ಎರವಲು ಪಡೆದ ಹದಗೆಟ್ಟ ಬೋಟ್‌ನಲ್ಲಿ ಶೋಧ ಕಾರ್ಯ ನಡೆದಿದೆ.
ಜಿಲ್ಲೆಯ ಎರಡು ಬದಿಗಳಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ಬೃಹತ್ ನದಿಗಳಿವೆ. ೨೦೦೯ ರಿಂದ ಜಿಲ್ಲೆ ಒಂದಿಲ್ಲೊಂದು ಪ್ರವಾಹಗಳ ಒತ್ತಡಕ್ಕೆ ಗುರಿಯಾಗುತ್ತಲೆ ಬಂದಿದೆ. ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲೂ ಅಗ್ನಿಶಾಮಕದಳಗಳಿದ್ದು, ಅಲ್ಲಿ ಪ್ರವಾಹದ ಸಂದರ್ಭದಲ್ಲಿ ಜೀವ ರಕ್ಷೆ ಮತ್ತು ಅನಾಹುತಗಳಿಂದ ಜನರಿಂದ ಸುರಕ್ಷಿತವಾಗಿ ಹೊರ ತರಲು ನೆರವಾಗುವ ಬೋಟ್ ಸೌಲಭ್ಯ ಇಲ್ಲದಿರುವುದು ಸರ್ಕಾರ ಮತ್ತು ಜಿಲ್ಲಾಡಳಿತ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ನಿರ್ಲಕ್ಷ್ಯತೆಯಲ್ಲಿ ನಿದ್ರಿಸುತ್ತಿವೆ. ಸಿಂಧನೂರಿನ ಘಟನೆಯಿಂದ ಜಿಲ್ಲಾಡಳಿತ ಪೇಚಿಗೆ ಸಿಕ್ಕುವಂತೆ ಮಾಡಿದೆ. ತುಂಗಭದ್ರಾ ನದಿಗೆ ಹತ್ತಿರದಲ್ಲಿರುವ ಮತ್ತು ತುಂಗಭದ್ರಾ ನದಿ ದಡದಲ್ಲಿ ಅನೇಕ ಗ್ರಾಮಗಳನ್ನು ಹೊಂದಿದ ಸಿಂಧನೂರು ತಾಲೂಕು ಅಗ್ನಿಶಾಮಕದಳ ಕೇಂದ್ರದಲ್ಲಿ ಯಂತ್ರ ಚಾಲಿತ ಸುಸಜ್ಜಿತ ಹಡಗು ವ್ಯವಸ್ಥೆ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಇದೇ ರೀತಿ ಇತರೆ ತಾಲೂಕುಗಳಲ್ಲಿ ಪರಿಸ್ಥಿತಿ ಯಥಾರೀತಿಯಲ್ಲಿದೆ.
ಜು.೧೫ ರಂದು ಮುಕುಂದ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಪ್ರವಾಹಕ್ಕೆ ಕೊಚ್ಚಿ ಹೋದ ಘಟನೆ ನಡೆಯಿತು. ಪ್ರವಾಹಕ್ಕೆ ಸಿಕ್ಕ ವ್ಯಕ್ತಿಯ ಶವ ಶೋಧನೆಗೆ ತಾಲೂಕಾಡಳಿತದಲ್ಲಿ ಯಂತ್ರ ಚಾಲಿತ ಹಡಗು ಇಲ್ಲದಿರುವುದರಿಂದ ಲಿಂಗಸೂಗೂರಿನಿಂದ ಹಡಗು ಎರವಲು ಪಡೆಯಲಾಗಿದೆ. ಅಸಮರ್ಪಕ ನಿರ್ವಹಣೆಯಿಂದಾಗಿ ಸರಿಯಾಗಿ ಕಾರ್ಯ ನಿರ್ವಹಿಸಿದ ಪರಿಸ್ಥಿತಿಯಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ವರ್ಗ ತುಂಬಿದ ನದಿಯಲ್ಲಿ ಶೋಧ ಕಾರ್ಯ ನಿರ್ವಹಿಸುತ್ತಿದ್ದಾರೆ. ನದಿಯ ನಡು ಭಾಗದಲ್ಲಿ ಹಡಗು ಸ್ಥಗಿತಗೊಂಡಂತಹ ಘಟನೆಗಳು ನಡೆದಿವೆ.
ಶವ ಹುಡುಕುವ ಕಾರ್ಯದಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಆತಂಕದಲ್ಲಿಯೆ ಕಾರ್ಯಾಚರಣೆ ನಿರ್ವಹಿಸುವಂತಹ ದುಸ್ಥಿತಿ ಇದೆ. ಎನ್‌ಡಿಆರ್‌ಎಫ್ ತಂಡ ಇದ್ದರೂ, ತುಂಗಭದ್ರಾ ನದಿಯಲ್ಲಿ ಶವ ಶೋಧನೆಗೆ ಬಾರದಿರುವುದರಿಂದ ಅಗ್ನಿಶಾಮಕದಳ ಸಿಬ್ಬಂದಿ ಇರುವ ಒಂದು ಹಡಗಿನಲ್ಲಿ ಶೋಧ ಕಾರ್ಯಾಚರಣೆ ನಡೆಸುವಂತಹ ದುಸ್ಥಿತಿ ಇದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಜಿಲ್ಲೆಗೆ ಹೆಚ್ಚಿನ ಸೌಕರ್ಯ ದೊರೆಯುವಂತಹ ಅದರಲ್ಲೂ ವಿಶೇಷವಾಗಿ ಪ್ರತಿ ಅಗ್ನಿಶಾಮಕದಳಕ್ಕೆ ಸುಸಜ್ಜಿತ ಹಡಗು ಒದಗಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ.