ಶೋಕ ಸಾಗರದ ಮಧ್ಯೆ ಹುಟ್ಟೂರಲ್ಲಿ ಜರುಗಿದ ಸಂಜೀವಕುಮಾರ ರಾಯಪಳ್ಳೆ ಅಂತ್ಯಕ್ರಿಯೆ

ಬಸವಕಲ್ಯಾಣ:ಎ.13: ತಾಲೂಕಿನ ಮಿರ್ಜಾಪೂರ ಗ್ರಾಮದ ನಿವಾಸಿ ಅರೆಸೇನಾ ಪಡೆಯ ಸಿಬ್ಬಂದಿ ಸಂಜೀವಕುಮಾರ ರಾಯಪಳ್ಳೆ (40) ಅವರು ಶನಿವಾರ ತಮೀಳುನಾಡಿನ ಮಧುರೈನಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದರು. ಸೋಮವಾರ ಶೋಕ ಸಾಗರದ ಮಧ್ಯೆ ಮಿರ್ಜಾಪೂರ ಗ್ರಾಮದಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಜರುಗಿತು.

ಸಂಜೀವಕುಮಾರ ರಾಯಪಳ್ಳೆ ಅವರು ಕಳೆದ ಕೆಲ ವರ್ಷಗಳಿಂದ ಉತ್ತರಪ್ರದೇಶದ ಅಲಹಬಾದ್‍ನಲ್ಲಿ ಭಾರತೀಯ ಸೇನೆಯ ಐಟಿಬಿಪಿಯಲ್ಲಿ ಅರೆಸೇನಾ ಪಡೆಯ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮೀಳುನಾಡಿನ ಮಧುರೈನಲ್ಲಿ ತರಬೇತಿಗಾಗಿ ಕಳಿಸಲಾಗಿತ್ತು. ತರಬೇತಿ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೋನೆಯುಸಿರೆಳೆದಿದ್ದಾರೆ. ಸೋಮವಾರ ತನ್ನ ಹುಟ್ಟೂರಿನ ಮಿರ್ಜಾಪೂರ ಗ್ರಾಮದಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಜರುಗಿತು. ಕುಟುಂಬಸ್ಥರು, ಗ್ರಾಮಸ್ಥರು, ವಿವಿಧ ಪಕ್ಷಗಳ ರಾಜಕೀಯ ಜನ ಪ್ರತಿನಿಧಿಗಳು ಸೇರಿದಂತೆ ನೆಂಟರಿಸ್ಟರು ಅಂತ್ಯಕ್ರಿಯೆಲ್ಲಿ ಭಾಗವಹಿಸಿದರು.

ಭಾನುವಾರ ತಡ ರಾತ್ರಿ ಸಂಜೀವಕುಮಾರ ರಾಯಪಳ್ಳೆ ಅವರ ಪಾರ್ಥಿವ ಶರೀರ ನಗರಕ್ಕೆ ಆಗಮಿಸಿತು. ಸೋಮವಾರ ಬೆಳಿಗ್ಗೆ 8ಕ್ಕೆ ಕೋಟೆಯಿಂದ ಮುಖ್ಯ ರಸ್ತೆಯ ಮಾರ್ಗವಾಗಿ ಸಸ್ತಾಪೂರ ಬಂಗ್ಲಾದ ಮೂಲಕ ತಾಲೂಕಿನ ಮಿರ್ಜಾಪೂರ ಗ್ರಾಮಕ್ಕೆ ಪಾರ್ಥಿವ ಶರೀರ ತರಲಾಯಿತು. ಹೂವಿನಿಂದ ಅಲಂಕೃತಗೊಳಿಸಲಾದ ತೆರೆದ ವಾಹನದಲ್ಲಿ ಸಂಜೀವಕುಮಾರ ಅವರ ಪಾರ್ಥಿವ ಶರೀರ ಇಡಲಾಗಿತ್ತು.

ಮೆರವಣಿಗೆಯುದ್ದಕ್ಕೂ ಅಮರ ರಹೇ-ಅಮರ ರಹೇ ಸಂಜೀವಕುಮಾರ ಅಮರ ರಹೇ, ಭಾರತ ಮಾತಾಕೀ ಜೈ ಎಂಬ ಘೋಷಣೆಗಳು ಮೊಳಗಿದವು. ದಾರಿ ಮಧ್ಯದಲ್ಲಿ ಸಾರ್ವಜನಿಕರು ಪಾರ್ಥೀವ ಶರೀರಕ್ಕೆ ಮುಟ್ಟಿ ನಮಸ್ಕರಿಸುತ್ತಿದ್ದರು. ತಾಲೂಕಿನ ಸಸ್ತಾಪೂರ ಗ್ರಾಮದಲ್ಲಿ ಸಾರ್ವಜನಿಕರು ಹೂಮಾಲೆ ಸಲ್ಲಿಸಿ ದರ್ಶನ ಪಡೆದರು. ನಂತರ ಮಿರ್ಜಾಪೂರ ಗ್ರಾಮಕ್ಕೆ ಪಾರ್ಥೀವ ಶರೀರ ಆಗಮಿಸುತ್ತಿದ್ದಂತೆ ಗ್ರಾಮದ ಕೆಲವರು ಕಣ್ಣಿರು ಹಾಕಿ ಕಂಬನಿ ಮಿಡಿದರು.

ಸಸ್ತಾಪೂರ ಗ್ರಾಮದಿಂದ ನೇರವಾಗಿ ಮಿರ್ಜಾಪೂರ ಗ್ರಾಮಕ್ಕೆ ತೆರಳಿದ ನಂತರ ಸಂಜೀವಕುಮಾರ ಅವರ ನಿವಾಸಕ್ಕೆ ಪಾರ್ಥಿವ ಶರೀರ ತರಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ಸರಕಾರಿ ಶಾಲೆಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಸಿದ್ದಪಡಿಸಲಾಗಿತ್ತು. ಸಾರ್ವಜನಿಕರು ಸಂಜೀವಕುಮಾರ ಅವರ ಅಂತಿಮ ದರ್ಶನ ಪಡೆದರು.

ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಲು ಆಗಮಿಸಿದ ಕುಟುಂಬಸ್ಥರು, ವಿವಿಧ ಪಕ್ಷಗಳ ರಾಜಕೀಯ ಜನಪ್ರತಿನಿಧಿಗಳು ಗ್ರಾಮಸ್ಥರು ಅಂತಿಮ ದರ್ಶನ ಪಡೆದ ನಂತರ ಅವರ ಹೊಲದಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಜರುಗಿತು. ಅಂತ್ಯಕ್ರಿಯೆಯಲ್ಲಿ ಶಾಸಕ ಶರಣು ಸಲಗರ, ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್ ಖೂಬಾ, ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಸೇರಿದಂತೆ ಗಣ್ಯರು, ಪ್ರಮುಖರು ಕಂದಾಯ ಇಲಾಖೆಯ, ಗ್ರಾಪಂ ಸಿಬ್ಬಂದಿಗಳು ಭಾಗವಹಿಸಿದರು.

ಐಟಿಬಿಪಿಯ ಸಿಬ್ಬಂದಿಗಳು ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಿದರು. ಐಟಿಬಿಪಿಯ ಅಧಿಕಾರಿಗಳು ಭಾಗವಹಿಸಿದರು. ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಅಂಬರೀಷ್ ವಾಗಮೋರೆ ಸೇರಿದಂತೆ ಸಿಬ್ಬಂದಿಗಳು ಸ್ಥಳದಲ್ಲಿದ್ದು ಕರ್ತವ್ಯ ನಿರ್ವಹಿಸಿದರು.