
ಶಿವಮೊಗ್ಗ, ಜು.15; ಬ್ಯಾಂಕುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನ ನೀಡಿ, ಸಾಲ ಪಡೆಯುವಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬ್ಯಾಂಕುಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ (ಡಿಎಲ್‍ಆರ್‍ಸಿ) ಮತ್ತು ಡಿಸಿಸಿ ಬ್ಯಾಂಕರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.2022-23 ನೇ ಸಾಲಿನಲ್ಲಿ ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಕೇವಲ ಶೇ.8.76 ಪ್ರಗತಿ ಸಾಧಿಸಲಾಗಿದೆ. 466.1 ಕೋಟಿ ಗುರಿಯಲ್ಲಿ 44.81 ಕೋಟಿ ಮಾತ್ರ ಸಾಲ ನೀಡಲಾಗಿದೆ. ಶೈಕ್ಷಣಿಕ ಗುರಿ ಸಾಧಿಸಲು ತೊಡಕಾಗಿರುವ ಅಂಶಗಳ ಕುರಿತು ಬ್ಯಾಂಕುಗಳು ಮತ್ತು ಜಿ.ಪಂ ಸಿಇಓ ಪರಿಶೀಲನೆ ನಡೆಸಬೇಕು. ಬಂದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಹಾಗೂ ಸ್ವಲ್ಪ ಉದಾರತೆಯಿಂದ ನಡೆದುಕೊಂಡಲ್ಲಿ ಹೆಚ್ಚು ಅರ್ಜಿಗಳು ಬರಬಹುದು. ಈ ನಿಟ್ಟಿನಲ್ಲಿ ಕ್ರಮ ವಹಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ತಿಳಿಸಿದರು.ವಸತಿ ಯೋಜನೆಗೆ ಸಂಬಂಧಿಸಿದಂತೆ ರೂ.1173.08 ಕೋಟಿ ಗುರಿಗೆ 146.51 ಕೋಟಿ ವೆಚ್ಚ ಮಾಡಿ ಶೇ12.49 ಪ್ರಗತಿ ಸಾಧಿಸಲಾಗಿದೆ. ಈ ವಿಷಯವಾಗಿ ಸಹ ಗಮನ ಹರಿಸಿ, ನಿಗದಿತ ಗುರಿ ಸಾಧಿಸಬೇಕೆಂದರು.ಪಿಎಂ ಸ್ವನಿಧಿ ಯೋಜನೆಯಡಿ ಮೊದಲನೇ ಹಂತದ ಸಾಲ ರೂ. 10 ಸಾವಿರವನ್ನು 5290 ಫಲಾನುಭವಿಗಳು, ರೂ. 20 ಸಾವಿರವನ್ನು 1882 ಮತ್ತು ರೂ. 50 ಸಾವಿರ ಸಾಲವನ್ನು 173 ಜನರು ಪಡೆದಿದ್ದು, ಹಂತ ಹಂತವಾಗಿ ಫಲಾನುಭವಿಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಸಮತೋಲನವಾಗಿ ಸಾಲವನ್ನು ಫಲಾನುಭವಿಗಳು ತೆಗೆದುಕೊಳ್ಳಲು ಅಗತ್ಯವಾದ ಕ್ರಮ ಕೈಗೊಳ್ಳಬೇಕೆಂದರು.ನಬಾರ್ಡ್ ಡಿಡಿಎಂ ಶರತ್ ಗೌಡ ಮಾತನಾಡಿದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಅಮರ್ ನಾಥ್ ಸ್ವಾಗತಿಸಿದರು. ಜಿಲ್ಲೆಯ ವಿವಿಧ ಬ್ಯಾಂಕುಗಳ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.