ಶೈಕ್ಷಣಿಕ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆಹರಿಸಲಿ: ಸಿಎಫ್‌ಐ

ಮಂಗಳೂರು, ಜೂ.೩- ಕೊರೋನ-ಲಾಕ್‌ಡೌನ್ ಮಧ್ಯೆ ರಾಜ್ಯದ ವಿವಿಧ ವಲಯಗಳಲ್ಲಿ ಶೈಕ್ಷಣಿಕ ಸಮಸ್ಯೆಗಳು ಉದ್ಭವಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳ ಮತ್ತು ಪೋಷಕರು ತೀವ್ರ ಆತಂಕಿತರಾಗಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಗಮನಹರಿಸದಿರುವುದು ವಿಪರ್ಯಾಸ. ತಕ್ಷಣ ರಾಜ್ಯ ಸರಕಾರ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಿಎಫ್‌ಐ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಒತ್ತಾಯಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್‌ಲೈನ್ ತರಗತಿ ಹಾಗೂ ಕಾಲೇಜು ಶುಲ್ಕದ ಸಮಸ್ಯೆ ರಾಜ್ಯದಲ್ಲಿದೆ. ಅರಿವು ಸಾಲ ಯೋಜನೆ ಹಾಗೂ ವಿದ್ಯಾರ್ಥಿ ವೇತನ ವಿತರಣೆಯಾಗಿಲ್ಲ. ಶಿಕ್ಷಕರು ಕೂಡ ಸಮಸ್ಯೆ ಎದುರಿಸುತ್ತಿ ದ್ದಾರೆ. ರಾಜ್ಯದ ಅರೆವೈದ್ಯಕೀಯ ವಿಭಾಗಕ್ಕೆ ಸರಕಾರದ ಅಧೀನದಲ್ಲಿ ಮಂಡಳಿ ಸ್ಥಾಪಿಸುವ ಅಗತ್ಯವಿದೆ. ಲಾಕ್‌ಡೌನ್‌ನ ಸಂದಿಗ್ಧ ಪರಿಸ್ಥಿತಿಯಲ್ಲೂ ಹಲವು ಖಾಸಗಿ ಶಾಲಾ-ಕಾಲೇಜುಗಳು ಶುಲ್ಕವನ್ನು ಪಾವತಿಸಲು ಹೇಳಿ ಮಾನಸಿಕ ಕಿರುಕುಳ ನೀಡಿ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆರ್ಥಿಕ ಸಂಕಷ್ಟದ ಕಾರಣ ವಿದ್ಯಾರ್ಥಿಗಳು ಶುಲ್ಕ ಪಾವತಿಸದಿರುವು ದರಿಂದ ಆನ್‌ಲೈನ್ ತರಗತಿಗಳಿಗೆ ಅನುಮತಿ ನಿರಾಕರಿಸುತ್ತಿದ್ದಾರೆ. ಶುಲ್ಕ ಪಾವತಿಸಲು ಹೆಚ್ಚಿನ ಸಮಯವಕಾಶವನ್ನು ನೀಡ ಬೇಕು. ಆನ್‌ಲೈನ್ ತರಗತಿಗಳಿಗೆ ಅನುಮತಿ ನಿರಾಕರಿಸಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡಬಾರದು ಎಂದು ಒತ್ತಾಯಿಸಿದ್ದಾರೆ. ಅರಿವು ಸಾಲ ಯೋಜನೆ ಹಾಗೂ ವಿದ್ಯಾರ್ಥಿ ವೇತನ ಮಂಜೂರಾಗದ ಕಾರಣ ಕಾಲೇಜು ಶುಲ್ಕವನ್ನು ಪಾವತಿಸಲಾಗದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದರೂ ಕಳೆದ ಸಲದ ವಿದ್ಯಾರ್ಥಿ ವೇತನ ಇನ್ನೂ ಕೂಡ ರಾಜ್ಯದ ಹಲವಾರು ವಿದ್ಯಾರ್ಥಿಗಳಿಗೆ ಮಂಜೂರಾಗಿಲ್ಲ. ಅಲ್ಲದೆ ಅರಿವು ಸಾಲ ಯೋಜನೆಯ ಬಗ್ಗೆ ಇಲಾಖೆಯೇ ಮೌನ ವಹಿಸಿದೆ. ಹಾಗಾಗಿ ಸರಕಾರವು ಅರಿವು ಸಾಲ ಯೋಜನೆ ಹಾಗೂ ವಿದ್ಯಾರ್ಥಿ ವೇತನ ಮಂಜೂರುಗೊಳಿಸಬೇಕು ಎಂದು ಆಗ್ರಹಿಸಿದರು. ಸರಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್‌ನಲ್ಲಿ ಶಿಕ್ಷಕರಿಗೆ ಅಥವಾ ಶೈಕ್ಷಣಿಕ ವಲಯದಲ್ಲಿ ದುಡಿಯುತ್ತಿರುವವರಿಗೆ ಯಾವುದೇ ಪ್ಯಾಕೇಜ್ ಘೋಷಿಸದೆ ಶೈಕ್ಷಣಿಕ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೀಡಾದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಾಗ ಶಿಕ್ಷಕರನ್ನೂ ಪರಿಗಣಿಸಬೇಕಾಗಿತ್ತು. ಗುತ್ತಿಗೆ, ಅರೆಕಾಲಿಕ ನೇಮಕಾತಿಯ ಮೂಲಕ ಶಿಕ್ಷಕ ವೃತ್ತಿಗೆ ಆಯ್ಕೆಯಾಗಿ ಅಲ್ಪ ಸ್ವಲ್ಪ ವೇತನದಿಂದ ಸ್ವಾಭಿಮಾನದ ಜೀವನ ನಡೆಸುತ್ತಿದ್ದ ಶಿಕ್ಷಕರು ಲಾಕ್‌ಡೌನ್ ಸಂದರ್ಭ ಯಾವುದೇ ವೇತನವಿಲ್ಲದೆ ತಮ್ಮ ಅಳಲನ್ನು ಯಾರ ಬಳಿಯೂ ಹೇಳಲಾರದ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಶಿಕ್ಷಕರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮನವಿ ಮಾಡಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಮೂಲಕ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರ ನಡೆಯುತ್ತಿದ್ದು, ಇದನ್ನು ಅನುಷ್ಠಾನಕ್ಕೆ ತರಲು ಮುಂದಾದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಿಎಫ್‌ಐ ರಾಜ್ಯ ಸಮಿತಿಯ ಸದಸ್ಯ ಸಾದಿಕ್ ಜಾರತ್ತಾರು, ದ.ಕ.ಜಿಲ್ಲಾ ಮುಖಂಡರಾದ ಸಿರಾಜ್ ಮಂಗಳೂರು, ಇಮ್ರಾನ್ ಪಾಂಡವರಕಲ್ಲು, ಗ್ರಾಮಾಂತರ ಜಿಲ್ಲಾಧ್ಯಕ್ಷ ಶರ್ಫುದ್ದೀನ್ ಉಪಸ್ಥಿತರಿದ್ದರು.