
ಕಲಬುರಗಿ,ಫೆ,10:ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಬಹು ದಿನಗಳಿಂದ ಕಾರ್ಯನಿರ್ವಹಿಸುತ್ತಿರುವ ಹಳೆ ಅಧ್ಯಾಪಕರಿಗೆ ಖಾಲಿ ಇರುವ ಹುದ್ದೆಗಳಿಗೆ ಅಥವಾ ಪೂರ್ಣ ಕಾರ್ಯಭಾರ ಇರುವ ಕಡೆ ವರ್ಗಾವಣೆ ಹೊಂದಲು ತಕ್ಷಣವೇ ‘ಶೈಕ್ಷಣಿಕ ಲೋಕ ಅದಾಲತ್’ ನಡೆಸಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಆಗ್ರಹಿಸುತ್ತದೆ.
ರಾಜ್ಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 26 ಬೋಧನಾ ವಿಷಯಗಳ ಒಟ್ಟು 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಪ್ರಕ್ರಿಯೆಯು ಈಗಾಗಲೇ ಅಂತಿಮ ಹಂತದಲ್ಲಿರುತ್ತದೆ. ಹೊಸ ಅಧ್ಯಾಪಕರನ್ನು ನಿಯುಕ್ತಿಗೊಳಿಸುವ ಪೂರ್ವದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಳೆ ಅಧ್ಯಾಪಕರಿಗೆ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ವರ್ಗಾವಣೆ ಹೊಂದಲು ಶೀಘ್ರವೇ ಶೈಕ್ಷಣಿಕ ಲೋಕ ಅದಾಲತ್ ನಡೆಸುವ ಮೂಲಕ ಹಳೆ ಅಧ್ಯಾಪಕರಿಗೆ ತಮ್ಮ ಅನುಕೂಲ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಅಧ್ಯಾಪಕರ ಸಂಘವು ಒತ್ತಾಯಿಸುತ್ತದೆ.
ಶೈಕ್ಷಣಿಕ ಅದಾಲತ್ ನಡೆಸದೇ ಕೇವಲ ಹೊಸ ಸಹಾಯಕ ಪ್ರಾಧ್ಯಾಪಕರಿಗೆ ಮಾತ್ರ ಸ್ಥಳ ನಿಯುಕ್ತಿಗೆ ಅವಕಾಶ ಕಲ್ಪಸಿದರೆ ಹಳೆ ಸಹ ಪ್ರಾಧ್ಯಾಪಕರುಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಶೈಕ್ಷಣಿಕ ಅದಾಲತ್ತನ್ನು ನಡೆಸಿದರೆ ಮಾತ್ರ ಹಳೆ ಅಧ್ಯಾಪಕರಿಗೆ ತಮ್ಮ ಅನುಕೂಲ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಒಂದು ವೇಳೆ ಕೇವಲ ಹೊಸ ಅಧ್ಯಾಪಕರಿಗೆ ಮಾತ್ರ ವಿವಿಧ ಕಾಲೇಜುಗಳಿಗೆ ಸ್ಥಳ ನಿಯುಕ್ತಿಗೊಳಿಸಿದರೆ ಖಾಲಿ ಇರುವ ಹುದ್ದೆಗಳೆಲ್ಲವೂ ಭರ್ತಿಯಾಗಿ ಹಳೆ ಅಧ್ಯಾಪಕರಿಗೆ ಮತ್ತೆ ಗ್ರಾಮೀಣ ಸೇವೆ ಸಲ್ಲಿಸುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಶೈಕ್ಷಣಿಕ ಅದಲತ್ ನಡೆಸಿ ನಗರ ಪ್ರದೇಶದ ಆಯಾ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಏಕೆಂದರೆ ಹೊಸ ಸಹಾಯಕ ಪ್ರಾಧ್ಯಾಪಕರುಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ನೇಮಕಾತಿ ನಿಯಮದ ಪ್ರಕಾರ ಕಡ್ಡಾಯವಾಗಿರುತ್ತದೆ. ಹೀಗಾಗಿ ಆ ನಿಯಮಗಳನ್ನು ಸರಕಾರ ಕಡ್ಡಾಯವಾಗಿ ಪಾಲಿಸಬೇಕು.ಇಲ್ಲವಾದರೆ ಸುಮಾರು 10-15 ವರ್ಷಗಳಿಂದ ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವಂತ ಹಳೆ ಅಧ್ಯಾಪಕರಿಗೆ ಅನ್ಯಾಯ ಮಾಡಿದಂತಾಗುತ್ತದೆ.ಜೊತೆಗೆ ಶೈಕ್ಷಣಿಕ ಅದಾಲತ್ ನಡೆಸುವಾಗ ಯಾವುದೇ ವಲಯವಾರು ಕಡ್ಡಾಯ ವರ್ಗಾವಣೆ ನೀತಿ ಅನುಸರಿಸದೆ, ವಲಯವಾರು ಮುಕ್ತ ವರ್ಗಾವಣೆ ನೀತಿ ಅನುಸರಿಸಿದರೆ ಹಲವು ಹಳೆ ಅಧ್ಯಾಪಕರು ಎಲ್ಲಿ ಬೇಕಾದರೂ ತಮಗೆ ಬೇಕಾದ ಸ್ಥಳಗಳಿಗೆ ಬೇಕಾದ ಕಡೆ ವರ್ಗಾವಣೆ ಪಡೆಯಬಹುದಾಗಿದೆ. ಇದರಿಂದಾಗಿ ಹಳೆ ಅಧ್ಯಾಪಕರಿಗೆ ಶೈಕ್ಷಣಿಕವಾಗಿ ತುಂಬಾ ಅನುಕೂಲವಾಗುತ್ತದೆ. ಒಂದು ವೇಳೆ ಶೈಕ್ಷಣಿಕ ಅದಾಲತ್ ನಡೆಸದೆ ಹೊಸ ಅಧ್ಯಾಪಕರಿಗೆ ಸ್ಥಳ ನಿಯುಕ್ತಿಗೊಳಿಸಿದರೆ ಹಳೆ ಅಧ್ಯಾಪಕರನ್ನು ಕಡೆಗಣಿಸಿದಂತಾಗುತ್ತದೆ. ಜೊತೆಗೆ ಹಳೆ ಅಧ್ಯಾಪಕರಿಗೆ ನಗರ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಅವಕಾಶದಿಂದ ವಂಚಿಸಿದಂತಾಗುತ್ತದೆ. ಇದರಿಂದಾಗಿ ಹಳೆ ಅಧ್ಯಾಪಕರಿಗೆ ಶೈಕ್ಷಣಿಕವಾಗಿ ತೀವ್ರವಾಗಿ ತೊಂದರೆಯಾಗುತ್ತದೆ. ಆದ್ದರಿಂದ ಇಂಥ ಅನ್ಯಾಯ ಮತ್ತು ಅನಾನುಕೂಲಗಳನ್ನು ತಪ್ಪಿಸಲು ತಕ್ಷಣವೇ ಶೈಕ್ಷಣಿಕ ಲೋಕ ಅದಾಲತ್ ನಡೆಸುವ ಮೂಲಕ ಹಳೆ ಅಧ್ಯಾಪಕರಿಗೆ ನಗರ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಈ ಮೂಲಕ ಮನವಿ ಮಾಡುತ್ತದೆ. ಅಧ್ಯಾಪಕರ ಸಂಘದ ವಿಭಾಗೀಯ ಅಧ್ಯಕ್ಷರಾದ ಡಾ.ಶರಣಪ್ಪ ಸೈದಾಪೂರ ಅವರ ನೇತೃತ್ವದಲ್ಲಿ ನಿಯೋಗದ ಮೂಲಕ ಗುಲಬರ್ಗಾದ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕರಾದ ಪ್ರೊ. ಸಂಜಯಕುಮಾರ ಪಟ್ಟಣಕರ್ ಅವರ ಮುಖಾಂತರ ಕಾಲೇಜು ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರು ಬೆಂಗಳೂರು ಅವರಿಗೆ ಇಂದು ಮನವಿ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳಾದ ಡಾ.ಚಿನ್ನಾ ಆಶಪ್ಪ, ಡಾ.ರವಿಂದ್ರಕುಮಾರ ಭಂಡಾರಿ, ಡಾ.ಶರಣಪ್ಪ ಗುಂಡಗುರ್ತಿ, ಡಾ.ರಾಜಶೇಖರ ಯರಬಾಗಿ, ,ಡಾ.ತ್ರಿವಿಕ್ರಮ ಯಕ್ಕಂಚಿ, ಪ್ರೊ.ರಮೇಶ ರಂಜೋಳ, ಡಾ.ಚಂದ್ರಕಾಂತ ಬಿರಾದರ ಹಾಗೂ ಶ್ರೀ ಸೋಫಿಸಾಬ ಇತರರು ಉಪಸ್ಥಿತರಿದ್ದರು.