ಚನ್ನಮ್ಮನ ಕಿತ್ತೂರ,ಮೇ.28: ರಾಜ್ಯ, ಜಿಲ್ಲೆ ಮತ್ತು ತಾಲೂಕಾದ್ಯಂತ ಮೇ. 29-2023 ರಂದು ಶಾಲೆಗಳು ಪ್ರಾರಂಭವಾಗುತ್ತಿದ್ದು ಆ ದಿನವನ್ನು ಹಬ್ಬದಂತೆ ಆಚರಿಸಿ. ಇಲಾಖೆ ಸೂಚಿಸಿರುವ ಶೈಕ್ಷಣಿಕ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಹೇಳಿದರು.
ತಾಲೂಕಿನ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಮುಖ್ಯ ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಶಾಲಾ ಪ್ರಾರಂಭೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು 2023-24ನೇ ಸಾಲಿನ ತಾಲೂಕಿನ ಎಲ್ಲ ಶಾಲೆಗಳ ಫಲಿತಾಂಶ ಮತ್ತಷ್ಟು ಗುಣಾತ್ಮಕಗೊಳಿಸಲು ಇಂದಿನಿಂದಲೇ ಕ್ರೀಯಾಯೋಜನೆ ರೂಪಿಸಿರಿ ಎಂದು ಶಿಕ್ಷಕರಿಗೆ ಹೇಳಿದರು.
ಶಾಲಾ ಆರಂಭೋತ್ಸವನ್ನು ಹಬ್ಬದಂತೆ ಹಸಿರು ತೋರಣಗಳಿಂದ ಸಿಂಗರಿಸಿ ಆಕರ್ಷಣೆಗೊಳಿಸಿ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿ ಮೊದಲನೇಯ ದಿನ ಸಿಹಿ ಊಟ ಬಡಿಸಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗದಂತೆ ಎಚ್ಚರವಹಿಸಬೇಕು. ಮೇ. 29ರಂದೆ ಎಲ್ಲ ಶಿಕ್ಷಕರು ಸರಿಯಾದ ಸಮಯಕ್ಕೆ ಹಾಜರಾಗತಕ್ಕದ್ದು. ಶಾಲಾ ಅಂಗಳ, ಅಡಿಗೆ ಕೋಣೆ, ಕೊಠಡಿಗಳು ಅಡುಗೆ ಪಾತ್ರೆಗಳು ಆಹಾರ ಧಾನ್ಯಗಳು, ನೀರಿನ ವ್ಯವಸ್ಥೆ ಇತ್ಯಾದಿಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಿ ಎಂದು ಸೂಚಿಸಿದರು. ಶಾಲಾ ಮೊದಲನೆ ದಿನ ವೇಳಾಪಟ್ಟಿ ಕಡ್ಡಾಯವಾಗಿ ಸಿದ್ಧಗೊಳಿಸಿಕೊಳ್ಳಿ. ಶಾಲಾ ವೇಳಾಪಟ್ಟಿಯಂತೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸತಕ್ಕದ್ದು. ವಿವಿಧ ಕ್ಲಬ್‍ಗಳ ರಚನೆ ಅವುಗಳ ಕ್ರೀಯಾಯೋಜನೆ ತಯಾರಿಕೆ ಮತ್ತಿತರ ಕಾರ್ಯಗಳಲ್ಲಿ ಗಮನಹರಿಸಿ ಶಾಲೆಗೆ ಬರದ ಮಕ್ಕಳ ಮನೆಗೆ ತೆರಳಿ ಪೋಷಕರ ಮನವೋಲಿಸಿ ಆ ಮಕ್ಕಳು ಶಾಲೆಯಿಂದ ವಂಚಿತರಾಗದಂತೆ ಕ್ರಮವಹಿಸಿ ಎಂದರು.
ಈ ವೇಳೆ ಬಿ.ಆರ್.ಸಿ. ಗಾಯತ್ರಿ ಅಜ್ಜನವರ, ಎಮ್.ಬಿ.ಹೆಗಡೆ, ಶಿಕ್ಷಕರುಗಳಾದ ಸಿದ್ದಪ್ಪ ಹುಲಮನಿ, ಮಹೇಶ ಚನ್ನಂಗಿ, ಬಿ.ಆರ್.ಸಿ ಮತ್ತು ಸಿ.ಆರ್.ಪಿ. ಮುಖ್ಯೋಪಾದ್ಯಾಯರು, ಸಹಶಿಕ್ಷಕರು, ಬಿ.ಇಓ ಕಛೇರಿ ಸಿಬ್ಬಂದಿ ಇದ್ದರು.