ಶೈಕ್ಷಣಿಕ ಬಿಕ್ಕಟ್ಟಿಗೆ ಸರ್ಕಾರ ಹೊಣೆ : ಸಿದ್ದು ಟೀಕೆ

ಬೆಂಗಳೂರು, ಡಿ. ೨೦- ರಾಜ್ಯದಲ್ಲಿ ಈಗ ಉಂಟಾಗಿರುವ ಶೈಕ್ಷಣಿಕ ಬಿಕ್ಕಟ್ಟಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ್‌ಕುಮಾರ್ ನೇರ ಹೊಣೆಗಾರರು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದು, ಸರ್ಕಾರದ ಎಡಬಿಡಂಗಿ ನಿಲುವಿನಿಂದ ವಿದ್ಯಾರ್ಥಿಗಳು, ಪೋಷಕರು ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಬೀದಿಗಿಳಿಯುವಂತಾಗಿದೆ ಎಂದು ಹೇಳಿದ್ದಾರೆ.
ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣವೂ ಇಲ್ಲ. ತರಗತಿ ನಡೆಯದೇ ಇದ್ದರೂ ಖಾಸಗಿ ಶಾಲೆಗಳು ಪೋಷಕರಿಗೆ ಪೂರ್ಣ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ಆನ್‌ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇಷ್ಟಾದರೂ ಶಿಕ್ಷಣ ಸಚಿವರು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ.
ಶಾಲೆಗಳಲ್ಲಿ ತರಗತಿ ನಡೆಯದೇ ಇದ್ದರೂ ಬೋಧನಾ ಶುಲ್ಕದ ಜತೆ ಪ್ರಯೋಗಶಾಲೆ, ಗ್ರಂಥಾಲಯ ಮತ್ತು ಪಠ್ಯೇತರ ಶುಲ್ಕ ವಸೂಲಿ ಮಾಡಲು ಖಾಸಗಿ ಶಾಲೆಗಳು ಹೊರಟಿವೆ. ಸರ್ಕಾರದ ಮಾತುಗಳಿಗೂ ಈ ಶಾಲೆಗಳು ಜಗ್ಗುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ಸರ್ಕಾರದ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಜತೆ ಶಾಮೀಲಾಗಿರುವಂತಿದೆ ಎಂದು ಅವರು ಹೇಳಿದ್ದಾರೆ.
ಶಾಲೆಗಳ ಪುನರಾರಂಭದ ಬಗ್ಗೆ ಸಭೆಗಳ ಮೇಲೆ ಸಭೆ ನಡೆಯುತ್ತಿವೆ. ಶಿಕ್ಷಣ ಸಚಿವರೂ ಮತ್ತು ಅಧಿಕಾರಿಗಳು ದಿನಕ್ಕೊಂದು ಹೇಳಿಕೆ ನೀಡಿ ಪೋಷಕರನ್ನು ಗೊಂದಲಕ್ಕೆ ನೂಕಿದ್ದಾರೆ. ತಕ್ಷಣವೇ ಶಿಕ್ಷಣ ಸಚಿವರು ಖಾಸಗಿ ಶಾಲೆಗಳ ಮಾಲೀಕರು ಮತ್ತು ಪೋಷಕರ ಸಭೆ ಕರೆದು ಪಾರದರ್ಶಕವಾಗಿ ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.