ಶೈಕ್ಷಣಿಕ ಪ್ರಗತಿ ಹೊಂದಲು ಪರಮಶಿವಯ್ಯ ಕರೆ

ಮಾಲೂರು.ಜ೧೦-ವೀರಶೈವ ನಿಗಮ ಮಂಡಳಿಯಲ್ಲಿ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಸಮುದಾಯದವರು ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷರು ಬಿ.ಎಸ್.ಪರಮಶಿವಯ್ಯ ಅವರು ತಿಳಿಸಿದರು.
ಮಾಲೂರು ಪಟ್ಟಣದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಯುವ ಘಟಕದ ವತಿಯಿಂದ ಸಂಘದ ವಾರ್ಷಿಕೋತ್ಸವ, ಯುವ ಘಟಕ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ನಿಗಮ ಮಂಡಳಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಿಗೆ ಹಾಗೂ ನೂತನ ಗ್ರಾ.ಪಂ. ಸದಸ್ಯರು, ಶಾಲಾ ಶಿಕ್ಷಕರ ಸಂಘದ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ವೀರಶೈವ ಸಮಾಜದ ಅಧ್ಯಕ್ಷರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದರು. ಸಮಾಜದ ವತಿಯಿಂದ ಉಚಿತವಾಗಿ ಕೆ.ಎ.ಎಸ್ ಹಾಗೂ ಐಎಎಸ್ ತರಗತಿಗಳನ್ನು ಪ್ರಾರಂಭಿಸಲಾಗುವುದು ಇದರ ಪ್ರಯೋಜನವನ್ನು ಪ್ರತಿಭಾವಂತ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕೆಂದರು.
ಮಠ ಮಾನ್ಯಗಳು ಸಮಾಜದಲ್ಲಿ ಹೆಚ್ಚಿನ ಪ್ರಾಭಲ್ಯ ಹೊಂದಿದ್ದು, ಮಠ ಮಾನ್ಯಗಳಲ್ಲಿ ಸಮುದಾಯ ಸೇರಿದಂತೆ ಇತರೆ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದೆ. ತುಮಕೂರಿನ ಸಿದ್ದಗಂಗಾ ಮಠ ಲಕ್ಷಾಂತರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಕ್ಷಣವನ್ನು ನೀಡುವ ಮೂಲಕ ರಾಜ್ಯದಲ್ಲಿ ಮಾದರಿಯಾಗಿದೆ ಎಂದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಯುವ ಘಟಕಗಳು ಹಾಗೂ ಮಹಾಸಭಾದ ಪದಾಧಿಕಾರಿಗಳು, ಮುಖಂಡರು ಒಗ್ಗಟ್ಟಾಗಿ ಜವಾಬ್ದಾರಿಯನ್ನು ವಹಿಸಿ ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದರು. ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ಗಡಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ಮಾತನಾಡಿದರು.
ಕಾರ್‍ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ತುಮಕೂರಿನ ಸಿದ್ದಗಂಗ ಕ್ಷೇತ್ರದ ಶ್ರೀ ಶ್ರೀ ಶ್ರೀ ನಿ.ಪ್ರ.ಸ್ವರೂಪಿ ಸಿದ್ದಲಿಂಗ ಮಹಾಸ್ವಾಮಿಗಳು ಆಶಿರ್ವಚನ ನೀಡಿ ಮಾತನಾಡಿದರು ಯುವಕರು ಸಮುದಾಯದ ಸಂಪತ್ತಾಗಿದ್ದು, ಸಮುದಾಯದ ಪ್ರತಿಯೊಬ್ಬರು ಪ್ರತಿನಿತ್ಯ ಲಿಂಗಪೂಜೆ ಮಾಡಬೇಕು, ಮಕ್ಕಳ ತಂದೆ ತಾಯಿ ಗುರುಗಳನ್ನು ಗೌರವಿಸಬೇಕು, ಸಮಾಜದಲ್ಲಿ ಹೆಣ್ಣು-ಗಂಡನ್ನು ಸಮಾನವಾಗಿ ಕಾಣಬೇಕು, ಮಕ್ಕಳು ತಂದೆ ತಾಯಿಗಳಿಗೆ ಆದರ್ಶ ಮಕ್ಕಳಾಗಿ ಬೆಳೆಯಬೇಕು.
ಸಮುದಾಯದ ಸಂಘಟನೆಯಲ್ಲಿ ಕೊರತೆ ಇದ್ದು, ಸಮುದಾಯದ ಸಂಘ ಸಂಸ್ಥೆಗಳು, ಮುಖಂಡರು ಒಗ್ಗಟ್ಟಾಗಿ ಐಕ್ಯತೆಯಿಂದ ಸಮುದಾಯದ ಅಭಿವೃದ್ಧಿಗೆ ಅಧ್ಯತೆ ನೀಡುವಂತೆ ತಿಳಿಸಿದ ಅವರು. ಇಲ್ಲಿನ ಕೋಲಾರ ಜಿಲ್ಲೆಯಲ್ಲಿ ಬೆಳ್ಳಾವಿ ಮಠ ಹಾಗೂ ನಾಗಲಾಪುರ ಮಠ ವೀರಶೈವ ಸಮಾಜದ ಭಕ್ತರ ಎರಡು ಕಣ್ಣುಗಳು ಇದ್ದಂತೆ ಭಕ್ತರು ಮಠದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ಬೆಳ್ಳಾವಿ ಸಂಸ್ಥಾನ ಮಠದ ಮಹಾಂತ ಶಿವಾಚಾರ್‍ಯಸ್ವಾಮಿ, ನಾಗಲಾಪುರ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್‍ಯ ಮಹಾಸ್ವಾಮಿ ಅವರು ೨೦೨೧ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಗೊಳಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ನಿಗಮ ಮಂಡಳಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಿಗೆ ಹಾಗೂ ನೂತನ ಗ್ರಾ.ಪಂ. ಸದಸ್ಯರು, ಶಾಲಾ ಶಿಕ್ಷಕರ ಸಂಘದ ಸದಸ್ಯರನ್ನು ಅಭಿನಂದಿಸಲಾಯಿತು.
ಕಾರ್‍ಯಕ್ರಮದಲ್ಲಿ ಅ.ಭಾ.ವೀ.ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕ ಪ್ರಸನ್ನ, ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಕೆರೆ, ಪುರಸಭಾ ಅಧ್ಯಕ್ಷ ಮುರಳೀಧರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಆರಾದ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ವಿನಾಯಕ ಪ್ರಭು, ಬಂಗಾರಪೇಟೆ ಶಂಕರ್, ಹಾರುಗದ್ದೆ ನಂಜಪ್ಪ, ಸದಾಶಿವಯ್ಯ, ಮಹೇಶ್ವರಪ್ಪ, ಎಂ.ವಿ.ತಮ್ಮಯ್ಯ, ನಂಜಪ್ಪ, ಷಡಕ್ಷರಸ್ವಾಮಿ, ಎನ್.ಆರ್.ಜ್ಞಾನಮೂರ್ತಿ, ಪಾಂಡುರಂಗಪ್ಪ, ಚನ್ನಪ್ಪ, ಬಿ.ವಿ.ವೀರಭದ್ರಯ್ಯ, ರಾಜಣ್ಣ, ತಾ.ಸಂ ಅಧ್ಯಕ್ಷ ಶಿವಶಂಕರಯ್ಯ, ಉಪಾಧ್ಯಕ್ಷರಾದ ಕೆ.ವಿ.ಚನ್ನವೀರದೇವರು, ಯುವಘಟಕದ ಅಧ್ಯಕ್ಷ ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶಶಿಧರ್, ಬಿ.ವಿ.ಸೋಮಶೇಖರ್, ಮಂಜುಳಮ್ಮ, ಉಮಾದೇವಿ, ಪತ್ರಿಕಾ ಕಾರ್ಯದರ್ಶಿ ನಂಜುಂಡಪ್ಪ, ರೇಣುಕ ಪ್ರಸಾದ್, ಚಂದ್ರಶೇಖರ್, ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.