ಶೈಕ್ಷಣಿಕ ಪ್ರಗತಿಯಿಂದ ಉತ್ತಮ ಭವಿಷ್ಯ

ಮಾಲೂರು, ಜ.೨೧:ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ ಆಸಕ್ತಿ ಛಲ ಶಿಸ್ತು ಸಮಯ ಪ್ರಜ್ಞೆ ರೂಡಿಸಿಕೊಂಡು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಾಗ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಮುಂದಿನ ಜೀವನ ರೂಪಿಸಿ ಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ಕೌನ್ಸಲರ್ ಇನ್ ಚೈಲ್ಡ್ ಗೈಡೆನ್ಸ್ ಸೆಂಟರ್ ಹಾಗೂ ಕೇಂಬ್ರಿಡ್ಜ್ ಪ್ರೀಸ್ಕೂಲ್‌ನ ಪ್ರಾಂಶುಪಾಲೆ ರತ್ನ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಕುಪ್ಪ ಶೆಟ್ಟಿ ಬಾವಿ ಬಳಿ ಇರುವ ಶ್ರೀರಾಮಕೃಷ್ಣ ವಿದ್ಯಾಪೀಠ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ವ್ಯಾಸಂಗದ ದಿನಗಳಲ್ಲಿ ಸಮಯ ವ್ಯರ್ಥ ಮಾಡದೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ ಶ್ರದ್ಧೆ ಆಸಕ್ತಿ ಛಲ ಗುರಿ ರೂಡಿಸಿಕೊಳ್ಳುವ ಮೂಲಕ ಶಾಲೆಯಲ್ಲಿ ಶಿಕ್ಷಕರು ಮಾಡುವ ಪಾಠ ಪ್ರವಚನಗಳು ಹಾಗೂ ಮಾರ್ಗದರ್ಶನವನ್ನು ಪಡೆದು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಹಾಗೂ ದೂರದರ್ಶನ ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗುತ್ತಿದ್ದಾರೆ. ಮೊಬೈಲ್ ಫೋನ್ ಹಾಗೂ ದೂರದರ್ಶನ ನಮ್ಮ ವಿದ್ಯಾರ್ಥಿ ಜೀವನವನ್ನು ಹಾಳು ಮಾಡುತ್ತದೆ ಇವುಗಳನ್ನು ಒಳ್ಳೆಯದಕ್ಕೆ ಅಷ್ಟೇ ಬಳಸಬೇಕು ಹೆಚ್ಚು ಕಾಲ ಬಳಸಿದರೆ ನಮ್ಮ ಸಮಯ ಹಾಗೂ ಆರೋಗ್ಯವು ಹದಗೆಡುತ್ತದೆ.
ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಮೊಬೈಲ್ ಫೋನು ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸದಂತೆ ತಿಳಿಸಬೇಕು. ಪೋಷಕರು ಸಹ ತಮ್ಮ ಮಕ್ಕಳಿಗೆ ಮನೆಗಳಲ್ಲಿ ಉತ್ತಮ ಹವ್ಯಾಸಗಳನ್ನು ರೂಡಿಸಬೇಕು ವಿದ್ಯಾರ್ಥಿಗಳು ಹಿರಿಯರು ಮತ್ತು ಗುರುಗಳನ್ನು ಗೌರವಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತಿತರ ಚಟುವಟಿಕೆಗಳಲ್ಲಿ ಭಾಗವಹಿಸಿ ಕ್ರಿಯಾಶೀಲರಾಗಿ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಸಮಯ ನಿಗದಿ ಪಡಿಸಿಕೊಳ್ಳಬೇಕು.
ಇಲ್ಲಿನ ಶ್ರೀರಾಮಕೃಷ್ಣ ವಿದ್ಯಾಪೀಠ ಶಾಲೆಯು ತುಂಬಾ ಹಳೆಯದಾದ ವಿದ್ಯಾಸಂಸ್ಥೆಯಾಗಿದ್ದು ಈ ವಿದ್ಯಾ ಸಂಸ್ಥೆಯಲ್ಲಿ ಶೈಕ್ಷಣಿಕವಾಗಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಈ ಶಾಲೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ೫ ಬಾರಿ ಶೇಕಡ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ ಉತ್ತಮ ಫಲಿತಾಂಶ ತರಲು ಶ್ರಮಿಸಿದ ಇಲ್ಲಿನ ಮುಖ್ಯ ಶಿಕ್ಷಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ವತಿಯಿಂದ ಅಭಿನಂದಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ತರಗತಿವಾರು ಅತ್ಯಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕಗಳ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ನಿವೃತ್ತ ಮುಖ್ಯಶಿಕ್ಷಕ ಆರ್.ನಾಗರಾಜ್, ಪುರಸಭಾ ಉಪಾಧ್ಯಕ್ಷೆ ಭಾರತಿ ಶಂಕರಪ್ಪ, ಮಾಜಿ ಉಪಾಧ್ಯಕ್ಷೆ ಶ್ರೀವಳ್ಳಿ, ಮುಖ್ಯ ಶಿಕ್ಷಕ ಬಿ.ವಿ.ಸೋಮಶೇಖರ್, ಸಹ ಶಿಕ್ಷಕರಾದ ಶ್ರೀನಿವಾಸ್ ಮೂರ್ತಿ, ನಾಗರಾಜು, ಮಂಜುಳ, ನೀಲಾಂಭಿಕೆ, ದೈಹಿಕ ಶಿಕ್ಷಕ ಲಕ್ಷ್ಮಿಕಾಂತ್, ಇನ್ನಿತರರು ಹಾಜರಿದ್ದರು.