ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿಲ್ಲ: ಬಳ್ಳಾರಿ

ಬ್ಯಾಡಗಿ,ಜು16: ಅತಿವೃಷ್ಠಿ ಮತ್ತು ಕೋವಿಡ್ ನಡುವೆಯೂ ಶೈಕ್ಷಣಿಕ ಪ್ರಗತಿಗೆ ಸರ್ಕಾರದಿಂದ ಯಾವುದೇ ಹಿನ್ನಡೆಯಾಗಿಲ್ಲ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ತಾವು ಪ್ರಸಕ್ತ ವರ್ಷದಲ್ಲಿಯೇ ನೂರಾರು ಕೋಟಿ ರೂಗಳ ಅನುದಾನವನ್ನು ತಂದಿರುವುದಾಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದಲ್ಲಿ ಎಸ್‍ಜೆಜೆಎಮ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಿರ್ಮಿತಿ ಕೇಂದ್ರ ಹಾಗೂ ಪಂಚಾಯತ್ ರಾಜ್ ಉಪವಿಭಾಗದ ವತಿಯಿಂದ 60ಲಕ್ಷ ರೂಗಳ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಿರುವ ಪ್ರಯೋಗಾಲಯ ಕೊಠಡಿ, ಹೈಟೆಕ್ ಶೌಚಾಲಯ ಮತ್ತು ಸಭಾಂಗಣದ ಮುಂದುವರೆದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇವಲ ಎಂಟು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೈಕ್ಷಣಿಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಈಗಾಗಲೇ ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 120 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ಇನ್ನೂ 50ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸಲು ಅನುದಾನ ಮಂಜೂರಾಗಲಿದ್ದು ಶೀಘ್ರದಲ್ಲಿಯೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರಲ್ಲದೇ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು 46ಕೋಟಿ ರೂಗಳ ಅಭಿವೃಧ್ಧಿ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಅಲ್ಲದೇ 2ಕೋಟಿ ರೂಗಳ ವಿಶೇಷ ಅನುದಾನದಡಿ ರಸ್ತೆ ಸುಧಾರಣೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಸರೋಜಮ್ಮ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ್, ಸದಸ್ಯರುಗಳಾದ ಬಸವಣ್ಣೆಪ್ಪ ಛತ್ರದ, ಫಕ್ಕೀರಮ್ಮ ಛಲವಾದಿ, ಕವಿತಾ ಸೊಪ್ಪಿನಮಠ, ಕಲಾವತಿ ಬಡಿಗೇರ, ಗಿರಿಜಮ್ಮ ಪಟ್ಟಣಶೆಟ್ಟಿ, ಚಂದ್ರಣ್ಣ ಶೆಟ್ಟರ, ಹನಮಂತಪ್ಪ ಮ್ಯಾಗೇರಿ, ಮಂಜಣ್ಣ ಬಾರ್ಕಿ, ವಿನಯ ಹಿರೇಮಠ, ಮೆಹಬೂಬ ಅಗಸನಹಳ್ಳಿ, ಜಿತೇಂದ್ರ ಸುಣಗಾರ, ಸುರೇಶ ಉದ್ಯೋಗಣ್ಣನವರ, ಗಣೇಶ ಅಚಲಕರ, ಶಿವಬಸಪ್ಪ ಕುಳೆನೂರ, ಶಿವಾನಂದ ಯಮನಕ್ಕನವರ, ವಿಜಯ ಮಾಳಗಿ, ನಾಗರಾಜ ಹಾವನೂರು, ಪ್ರಾಚಾರ್ಯ ಮಾಲತೇಶ ಬಂಡೆಪ್ಪನವರ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಡಿ.ಬಿ.ಕುಸುಗೂರ್ ಸ್ವಾಗತಿಸಿ ವಂದಿಸಿದರು.