ಶೈಕ್ಷಣಿಕ ಪ್ರಗತಿಗೆ ಸಮುದಾಯದ ಸಹಕಾರ ಅಗತ್ಯ

ಕಲಬುರಗಿ :ಎ.19: ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಕಾರಣವಾದ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆ ಕೇವಲ ಸರ್ಕಾರ ಜವಬ್ದಾರಿಯಲ್ಲ. ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಅವಶ್ಯಕವಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳು, ಮತ್ತೀತರರ ಶಿಕ್ಷಣ ಸಂಸ್ಥೆಗಳಿಗೆ ಸಾರ್ವಜನಿಕರು, ಶಿಕ್ಷಣ ಪ್ರೀಯರು ಸಹಾಯ ಹಸ್ತ ಚಾಚುವುದರಿಂದ ಅಲ್ಲಿನ ಶೈಕ್ಷಣಿಕ ವ್ಯವಸ್ಥೆ ಪ್ರಗತಿ ಹೊಂದಲು ಸಾಧ್ಯವಾಗುತ್ತದೆಯೆಂದು ಸಿಬಿಸಿ ಉಪಾಧ್ಯಕ್ಷ, ಮುಖಂಡ ರವಿ ಕೋಳ್ಕೂರ ಅಭಿಪ್ರಾಯಪಟ್ಟರು.

    ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಲಬುರಗಿಯ ಶ್ರೀಗುರು ಸ್ವತಂತ್ರ ಪದವಿ ಪೂರ್ವ ಕಾಲೇಜು ವತಿಯಿಂದ ದೇಣಿಗೆ ನೀಡಲಾದ ಹಸಿರು ಬೋರ್ಡಗಳನ್ನು ಕಾಲೇಜಿಗೆ ಸೋಮವಾರ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು.

ಬೋರ್ಡಗಳನ್ನು ಸ್ವೀಕರಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮಹ್ಮದ್ ಅಲ್ಲಾವುದ್ದೀನ ಸಾಗರ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಅವರ ಅಧ್ಯಯನಕ್ಕೆ ಅನಕೂಲವಾಗಲಿಯೆಂಬ ಸದುದ್ದೇಶದಿಂದ ಶ್ರೀಗುರು ಕಾಲೇಜಿನ ವತಿಯಿಂದ ನಮ್ಮ ಕಾಲೇಜಿಗೆ ಬೋರ್ಡುಗಳನ್ನು ನೀಡಿರುವುದು, ಆ ಸಂಸ್ಥೆಯ ಶೈಕ್ಷಣಿಕ ಕಾಳಜಿಯನ್ನು ತೋರಿಸುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಮಾಡಿಕೊಂಡು, ಉತ್ತಮವಾದ ಫಲಿತಾಂಶ ಪಡಯಲು ತಿಳಿಸಿದರು.