ಶೈಕ್ಷಣಿಕ ಪ್ರಗತಿಗೆ ಪೂರಕ ಉತ್ತಮ ವಾತಾವರಣ ಕಲ್ಪಿಸಿ

ಬ್ಯಾಡಗಿ, ನ 15- ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸುವಂತಾಗಬೇಕೆಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಾರ್ಯಾಲಯದ ಡಿವೈಪಿಸಿ ಸುನೀತಾ ಹೇಳಿದರು.
ಸ್ಥಳೀಯ ಎನ್.ಬಿ.ಬಿ. ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರಿಗೆ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ವಿಷಯವಾರು ಶಿಕ್ಷಕರ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗಾಗಿ ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವಂತೆ ತಿಳಿಸಿದರಲ್ಲದೆ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಆತಂಕವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಎನ್. ಶ್ರೀಧರ ಅವರು, ವಿದ್ಯಾರ್ಥಿಗಳಲ್ಲಿ ನಿರಂತರ ಕಲಿಕೆ ಇರುವಂತೆ ಶಿಕ್ಷಕರು ನೋಡಿಕೊಳ್ಳಬೇಕು. ಮಕ್ಕಳ ಕಲಿಕೆಗೆ ಪೂರಕವಾಗಿ ಶಿಕ್ಷಕರು ಮಕ್ಕಳ ಮನಸ್ಸನ್ನು ಗೆಲ್ಲುವಂತಗಬೇಕು. ಇದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉತ್ತಮ ವಾತಾವರಣ ಸೃಜಿಸಲು ಸಹಕಾರಿಯಾಗುವುದು ಎಂದು ಶಿಕ್ಷಕರಿಗೆ ಮಾರ್ಗದರ್ಶನವನ್ನು ನೀಡಿದರು,
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ. ರುದ್ರಮುನಿ ಮಾತನಾಡಿ, ಶಿಕ್ಷಕರು ತಮ್ಮ ದೈನಂದಿನ ಕಲಿಕಾ ಚಟುವಟಿಕೆ ಗಳಲ್ಲಿ ವಿಷಯವಾರು ಹೊಸ ಹೊಸ ಕೌಶಲ್ಯಗಳನ್ನು ಅಳವಡಿಸಿಕೊಂಡು ತರಗತಿಗಳನ್ನು ನಡೆಸಬೇಕು. ಜಿಲ್ಲೆಯಲ್ಲಿ ತಾಲೂಕನ್ನು ಪರೀಕ್ಷಾ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯುವಂತೆ ಕ್ರಮ ವಹಿಸಬೇಕು. ಶಾಲಾ ಮುಖ್ಯ ಶಿಕ್ಷಕರು ತಮ್ಮ ಸಹ ಶಿಕ್ಷಕರೊಂದಿಗೆ ಸಮನ್ವಯತೆ ಬೆಳೆಸಿಕೊಂಡು ಕಲಿಕೆಯಿಂದ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಗಮನ ಹರಿಸಬೇಕೆಂದು ತಿಳಿಸಿದರು.
ಕಾರ್ಯಾಗಾರದಲ್ಲಿ ವಿಷಯ ಪರಿವೀಕ್ಷಕರಾದ ಬಿ.ಎಸ್. ಪಾಟೀಲ, ಈರಪ್ಪ ಲಮಾಣಿ, ದೇವೇಂದ್ರಪ್ಪ ಬಸಮ್ಮನವರ, ಉತ್ತಮ ಫಲಿತಾಂಶವನ್ನು ಹೊಂದಲು ಶಿಕ್ಷಕರು ಕ್ರಿಯಾ ಯೋಜನೆ ತಯಾರಿಸುವ ಕುರಿತು ಮಾರ್ಗದರ್ಶನವನ್ನು ನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್. ಬಾರ್ಕಿ ಮಾತನಾಡಿ, ಕಳೆದ ಸಾಲಿನಲ್ಲಿ ತಾಲೂಕಿನ ಪ್ರೌಢಶಾಲೆಗಳ ಪರೀಕ್ಷಾ ಫಲಿತಾಂಶವನ್ನು ವಿಶ್ಲೇಷಣೆ ಮಾಡಿ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಹೊಂದಲು ಶಿಕ್ಷಕರು ಸಂಘಟಿತರಾಗಿ ಶ್ರಮಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಸಣಗಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಸಾಹಿತಿ ಜೀವರಾಜ ಛತ್ರದ ಅವರು ರಚಿಸಿದ “ಅಸಲಿ ಮಳೆ” ಹಾಗೂ “ಜೀವಣ್ಣನ ಆಧುನಿಕ ತ್ರಿಪದಿಗಳು” ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಶಿಕ್ಷಣ ಸಂಯೋಜಕ ಬಸವರಾಜ ಸೋಮಕ್ಕಳವರ ಸ್ವಾಗತಿಸಿದರು. ಬಿಆರ್’ಪಿ ರಾಘವೇಂದ್ರ ಮುದಿಗೌಡ್ರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.