ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

ಕಲಬುರಗಿ,ನ.10: 2022-2023ನೇ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ಉಪ ಕಾರ್ಮಿಕರ ಆಯುಕ್ತರ ಕಚೇರಿ ಮುಂದೆ ಕಟ್ಟಡ ಕಾರ್ಮಿಕರು ಧರಣಿ ಸತ್ಯಾಗ್ರಹ ಮಾಡಿದರು.

ಪ್ರತಿಭಟನೆಕಾರರು ನಂತರ ಉಪ ಕಾರ್ಮಿಕರ ಆಯುಕ್ತರ ಮೂಲಕ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಪ್ರತಿ ವರ್ಷ ಶೈಕ್ಷಣಿಕ ಸಹಾಯಧನ ನೀಡಲಾಗುತ್ತಿದೆ. ಆದಾಗ್ಯೂ, 2022-2023ನೇ ಸಾಲಿನಲ್ಲಿ ಶೈಕ್ಷಣಿಕ ಧನಸಹಾಯಕ್ಕೆ ಇದುವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡದೇ ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ಮಂಡಳಿಯ ಕಾರ್ಯದರ್ಶಿಗಳ ಬಳಿ ಅನೇಕ ಬಾರಿ ಚರ್ಚಿಸಲಾಗಿದೆ. ಹಲವು ತಿಂಗಳಿನಿಂದ ಅರ್ಜಿ ಕರೆಯಲಾಗುವುದು ಎಂಬ ಭರವಸೆ ನೀಡಲಾಗಿದೆ. ಎಸ್‍ಎಸ್‍ಪಿ ಪೋರ್ಟಲ್‍ನಲ್ಲಿ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ವಿಳಂಬವಾಗುತ್ತಿದ್ದು, ಅದನ್ನು ಪರಿಹರಿಸುವ ಕಾರ್ಯ ನಡೆದಿದೆ. ಶೀಘ್ರ ಬಗೆಹರಿಯಲಿದೆ ಎಂಬ ಆಶ್ವಾಸನೆ ಸಿಕ್ಕಿತ್ತು. ಆದಾಗ್ಯೂ, ಆ ಹೆಸರಿನಲ್ಲಿ ವಿಳಂಬ ಸಲ್ಲದು ಎಂದು ಅವರು ಆಕ್ಷೇಪಿಸಿದರು.
ಇತ್ತೀಚೆಗೆ ಬೋಗಸ್ ಕಾರ್ಡುಗಳ ಹಾವಳಿ ಹೆಚ್ಚಿದ್ದು, ಅವುಗಳನ್ನು ತಡೆಯಬೇಕು ಎಂದು ಒತ್ತಾಯಿಸಿದ ಅವರು, ಬೋಗಸ್ ಕಾರ್ಡ್‍ಗಳನ್ನು ತಡೆಯುವ ನೆಪದಲ್ಲಿ ಕಾರ್ಮಿಕರಿಗೆ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ಟೀಕಿಸಿದರು.
ಶೈಕ್ಷಣಿಕ ಸಹಾಯಧನ ಹೊರತುಪಡಿಸಿ ಇತರೆ ಎಲ್ಲ ಸೌಲಭ್ಯಗಳು ಚಾಲ್ತಿಯಲ್ಲಿವೆ. 6ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ, ಟೂಲ್ ಕಿಟ್ ವಿತರಣೆ ಯಾವುದೇ ಅಡ್ಡಿಯಿಲ್ಲದೇ ನಡೆಯುತ್ತಿವೆ. ನಿತ್ಯವೂ ಟೆಂಡರ್ ಜಾಹೀರಾತು ದಿನಪತ್ರಿಕೆಗಳಲ್ಲಿ ಪ್ರಕಟ ಆಗುತ್ತಲೇ ಇವೆ. ಯಾವುದೇ ಸೌಲಭ್ಯಗಳಿಗೆ ತಡೆ ಹಾಕಿಲ್ಲ. ಆದಾಗ್ಯೂ, ಬೋಗಸ್ ಕಾರ್ಡ್‍ಗಳ ಹಿನ್ನೆಲೆಯಲ್ಲಿ ಶೈಕ್ಷಣಿಕ ಧನಸಹಾಯ ತಡೆಹಿಡಿದಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಕೂಡಲೇ ಅರ್ಜಿಗಳನ್ನು ಕರೆಯಬೇಕು. 2021-2022ನೇ ಶೈಕ್ಷಣಿಕ ಸಾಲಿನಲ್ಲಿ ಮಂಡಳಿ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 60,000 ಅರ್ಜಿದಾರ ಫಲಾನುಭವಿಗಳಿಗೆ ಶೈಕ್ಷಣಿಕ ಧನಸಹಾಯ ಪಾವತಿಯಾಗಿಲ್ಲ. ಅದಕ್ಕೂ ಎಸ್‍ಎಸ್‍ಪಿ ಪೋರ್ಟಲ್‍ನಲ್ಲಿನ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಹಣ ಪಾವತಿಯಾಗಿಲ್ಲ. ಆದಾಗ್ಯೂ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಶೈಕ್ಷಣಿಕ ಧನಸಹಾಯ ದೊರೆಯುತ್ತದೆ ಎಂಬ ಭರವಸೆ ಭರವಸೆಯಾಗಿಯೇ ಉಳಿದಿದೆ. ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕಿ ಸುಜಾತಾ, ನಾಗಯ್ಯಸ್ವಾಮಿ ಜಿ, ಶೀಲಾದೇವಿ ಎಸ್. ಸಾಗರ್, ರವಿ ಸಿರಸಗಿ, ಅಶೋಕ್ ರಾಠೋಡ್, ಹಣಮಂತರಾಯ್ ಬಿ. ಪೂಜಾರಿ, ಯಶವಂತ್ ಪಾಟೀಲ್, ಆನಂದ್, ನಾಗಪ್ಪ ರಾಯಚೂರಕರ್, ಹಣಮಂತ್ ಗುತ್ತೇದಾರ್, ಲಕ್ಷ್ಮಣ್ ಪಾಟೀಲ್, ರಾಮು ರಾಠೋಡ್ ಮುಂತಾದವರು ಪಾಲ್ಗೊಂಡಿದ್ದರು.