ಶೈಕ್ಷಣಿಕ ಜ್ಞಾನದೊಂದಿಗೆ ಶಿಸ್ತಿನ ಕಲಿಕೆ ಅತಿಮುಖ್ಯ

ನಿಟ್ಟೆ,ಏ.೨- ’ವಿದ್ಯಾರ್ಥಿಗಳಲ್ಲಿ ಜ್ಞಾನವೃದ್ಧಿಸುವ ದೃಷ್ಟಿಯಿಂದ ಶೈಕ್ಷಣಿಕ ಸಂಸ್ಥೆಗಳು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ. ಅಂತೆಯೇ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜೀವನದ ಪರಿಕಲ್ಪನೆ ಮೂಡಲು ಎನ್.ಸಿ.ಸಿ ಬಹಳಷ್ಟು ಸಹಕಾರಿಯಾಗುತ್ತದೆ’ ಎಂದು ಮಂಗಳೂರಿನ ಎನ್.ಸಿ.ಸಿ ಗ್ರೂಪ್ ಹೆಡ್‌ಕ್ವಾರ್ಟಸ್‌ನ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ ಶರ್ಮ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೂತನವಾಗಿ ಆರಂಭಗೊಂಡ ಎನ್.ಸಿ.ಸಿ ಯುನಿಟ್‌ನನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ’ವಿದ್ಯಾರ್ಥಿದೆಸೆಯಲ್ಲಿ ಎನ್.ಸಿ.ಸಿಯಂತಹ ತರಬೇತಿ ಪಡೆದಲ್ಲಿ ಭವಿಷ್ಯ ಉಜ್ವಲವಾಗಲಿದೆ’ ಎಂದು ಅವರು ಹೇಳಿದರು.
೬ ಕೆ.ಎ.ಆರ್ ನೆವಲ್ ಯುನಿಟ್‌ನ ಉಡುಪಿಯ ಕಮಾಂಡಿಂಗ್ ಆಫೀಸರ್ ಕಮಾಂಡರ್ ನಂದ ಕಿಶೋರ ಮಾತನಾಡಿ ’ಶಿಸ್ತಿನ ಜೀವನ ಭವಿಷ್ಯದ ಏಳಿಗೆಗೆ ಸಹಕಾರಿಯಾಗುತ್ತದೆ. ನಿಟ್ಟೆ ಎನ್.ಸಿ.ಸಿ ಘಟಕದ ವಿದ್ಯಾರ್ಥಿಗಳ ಇಂದಿನ ಹುಮ್ಮಸ್ಸು ನೋಡಿದರೆ ಸಂತಸವಾಗುತ್ತದೆ’ ಎಂದರು.
ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ.ಎನ್.ವಿನಯ ಹೆಗ್ಡೆ ಶುಭಹಾರೈಸಿ ಸಂಸ್ಥೆಯ ವತಿಯಿಂದ ಎನ್.ಸಿ.ಸಿ ಘಟಕಕ್ಕೆ ಸರ್ವರೀತಿಯ ಸಹಕಾರ ನೀಡಲಾಗುವುದು ಎಂಬ ಭರವಸೆಯ ಮಾತನ್ನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಬೋಧಕವರ್ಗದವರು ಉಪಸ್ಥಿತರಿದ್ದರು.
ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಕೆಡೆಟ್ ಶಬರಿ ಮತ್ತು ನೇಹಾ ಅತಿಥಿಗಳನ್ನು ಪರಿಚಯಿಸಿದರು. ಎನ್.ಸಿ.ಸಿ ಸ್ಟೂಡೆಂಟ್ ಕೇರ್‌ಟೇಕರ್ ಡಾ.ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಕೆಡೆಟ್‌ಗಳಾದ ಸಿಂಚನ ಹಾಗೂ ಸೊನಾಲಿ ಕಾರ್ಯಕ್ರಮ ನಿರೂಪಿಸಿದರು.