ಶೈಕ್ಷಣಿಕ, ಗೃಹಸಾಲ ಯೋಜನೆಗಳಿಗೆ ಆದ್ಯತೆ ನೀಡಿ

ಮಂಗಳೂರು, ಡಿ.೩೦- ಜಿಲ್ಲೆಯ ಬ್ಯಾಂಕುಗಳು ಶೈಕ್ಷಣಿಕ ಮತ್ತು ಗೃಹ ಸಾಲ ಯೋಜನೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಆದ್ಯತೆ ನೀಡಿ ಇನ್ನಷ್ಟು ಪ್ರಗತಿ ಸಾಧಿಸಬೇಕು ಎಂದು ದ.ಕ.ಜಿ.ಪಂ. ಸಿಇಒ ಡಾ. ಸೆಲ್ವಮಣಿ ಆರ್ ಹೇಳಿದರು.
ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ದ.ಕ.ಜಿಲ್ಲಾ ಬ್ಯಾಂಕುಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸರಕಾರ ಜನರ ಕಲ್ಯಾಣಕ್ಕಾಗಿ ರೂಪಿಸುವ ಪ್ರತಿಯೊಂದು ಯೋಜನೆಗಳು ಹಾಗೂ ಕಾರ್ಯಕ್ರಮಗಳಡಿ ಆರ್ಥಿಕ ನೆರವು ಕೋರಿದ ಅರ್ಜಿಗಳನ್ನು ಅರ್ಹ ಫಲಾನುಭವಿಗಳಿಂದ ಪಡೆದು ವಿಳಂಬ ಮಾಡದೆ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಬ್ಯಾಂಕ್ ಮ್ಯಾನೇಜರ್‌ಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾವಾರು ಸಾಲ ಠೇವಣಿ ಅನುಪಾತವು ಆರ್‌ಬಿಐಯ ನಿಗದಿತ ಮಾನದಂಡಕ್ಕಿಂತ ಸ್ವಲ್ಪಕಡಿಮೆ ಇರುವುದರಿಂದ ಬ್ಯಾಂಕುಗಳು ಹೆಚ್ಚಿನ ಸಾಲ ನೀಡುವ ಮೂಲಕ ನಿರ್ದಿಷ್ಟ ಗುರಿ ಸಾಧಿಸಬೇಕು ಎಂದ ಅವರು, ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸೃಜನಶೀಲ ಯೋಜನೆಯಡಿ (ಪಿಎಮ್‌ಇಜಿಪಿ) ಜಿಲ್ಲೆಯ ಸಾಧನೆ ಉತ್ತಮವಾಗಿದೆ ಎಂದರು. ಬ್ಯಾಂಕ್ ನೀಡುವ ವಿವಿಧ ಸಾಲ ಸೌಲಭ್ಯವನ್ನು ಸೂಕ್ತ ಮಾಹಿತಿಯೊಂದಿಗೆ ಪ್ರಚಾರ ಪಡಿಸಿ ಗ್ರಾಹಕರು ಹೆಚ್ಚಿನ ಸಾಲ ಸೌಲಭ್ಯವನ್ನು ಪಡೆಯು ವಂತೆ ಪ್ರೇರೇಪಿಸಬೇಕು. ಬ್ಯಾಂಕ್‌ನ ಸಿಬ್ಬಂದಿ ವರ್ಗವು ಗ್ರಾಹಕರೊಂದಿಗೆ ವ್ಯವಹರಿಸುವಾಗ ತಾಳ್ಮೆ, ಸಹನೆಯಿಂದ ಸಹಕರಿಸಬೇಕು ಎಂದರು.
ಮುದ್ರಾ ಯೋಜನೆಯಡಿ ೭,೧೫೪ ಖಾತೆಗಳಿಗೆ ೭೬.೧೧ ಕೋ.ರೂ.ನಷ್ಟು ಸಾಲವು ಪ್ರಸ್ತುತ ಮೊದಲರ್ಧ ವರ್ಷದಲ್ಲಿ ವಿತರಿಸಲ್ಪಟ್ಟಿದೆ. ಅಟಲ್ ಪಿಂಚಣಿ ಯೋಜನೆಯಡಿ ೨೦೨೦ರ ಸೆಪ್ಟೆಂಬರ್ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕ್‌ಗಳಲ್ಲಿ ೮೦,೭೭೬ ಖಾತೆಗಳು ತೆರೆಯಲ್ಪಟ್ಟಿವೆ ಎಂದರು. ಖಾತರಿಪಡಿಸಿದ ತುರ್ತು ಕ್ರೆಡಿಟ್ ಲೈನ್ ಯೋಜನೆಡಿ ಜಿಲ್ಲೆಯ ಬ್ಯಾಂಕ್‌ಗಳು ಸೂಕ್ಷ್ಮ, ಅತೀ ಸಣ್ಣ ಮತ್ತು ಮಧ್ಯಮ ಉದ್ದಿಮೆ ವಲಯಕ್ಕೆ ಒಟ್ಟು ೧೨೯೩೨ ಖಾತೆಗಳಡಿ ೪೯೩.೮೧ ಕೋ.ರೂ.ಮಂಜೂರಾತಿ ನೀಡಲಾಗಿದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಡಿ.೧೫ರವರೆಗೆ ೩,೪೮೬ ಮಂಜೂರಾತಿ ಮಾಡಲಾಗಿದೆ ಎಂದರು. ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಎಂಪಿ ಮಾತನಾಡಿ ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ೬೪೦ ಬ್ಯಾಂಕ್ ಶಾಖೆಗಳಿದ್ದು, ಬ್ಯಾಂಕು ಗಳ ಒಟ್ಟು ವ್ಯವಹಾರ ೮೦,೫೯೨.೬೬ ಕೋ.ರೂ.ಆಗಿದೆ. ವರ್ಷದಿಂದ ವರ್ಷಕ್ಕೆ ಬ್ಯಾಂಕ್‌ಗಳು ಶೇ. ೯.೩೯ರಷ್ಟು ಬೆಳವಣಿಗೆಯನ್ನು ಸಾಧಿಸಿವೆ. ಜಿಲ್ಲೆಯಲ್ಲಿ ೭೬೦೮.೮೮ ಕೋ.ರೂ. ಸಾಲ ವಿತರಿಸಲಾಗಿದ್ದು ಮೊದಲರ್ದ ವರ್ಷದ ಗುರಿಯಾದ ೯೩೧೨.೧೬ ಕೋ.ರೂ. ಶೇ.೮೧.೭೧ ನಿರ್ವಹಣೆ ಯನ್ನು ಸಾಧಿಸಲಾಗಿದೆ ಎಂದರು. ಕೃಷಿ ಕ್ಷೇತ್ರಕ್ಕೆ ೨೬೨೫.೪೦ ಕೋ.ರೂ., ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಯಡಿ ೧೬೨೮.೮೧ ಕೋ.ರೂ., ವಿದ್ಯಾಭ್ಯಾಸ ಕ್ಷೇತ್ರಕ್ಕೆ ೨೩.೬೯ ಕೋ.ರೂ., ವಸತಿ ಕ್ಷೇತ್ರಕ್ಕೆ ೨೩೧.೧೨ ಕೋ.ರೂ. ಆದ್ಯತಾ ಕ್ಷೇತ್ರಕ್ಕೆ ೪೮೩೪.೬೧ ಕೋ.ರೂ. ಸಾಲ ಈವರೆಗೆ ವಿತರಣೆಯಾಗಿದೆ ಎಂದರು. ಆರ್‌ಬಿಐ ಸಹಾಯಕ ಮಹಾಪ್ರಬಂಧಕ ಜಿ. ವೆಂಕಟೇಶ್ ವೀಡಿಯೋ ಕಾನ್ಫರೆನ್ಸ್ ಮೂಲಕ ಇತ್ತೀಚಿಗೆ ಬದಲಾದ ಆರ್.ಬಿ.ಐ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು. ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಬಾಲಮುಕುಂದ ಶರ್ಮಾ, ಉಜಿರೆ ರುಡ್‌ಸೆಟ್ ನಿರ್ದೆಶಕ ಪಡದಯ್ಯಾ, ವಿವಿಧ ಬ್ಯಾಂಕುಗಳ ಮ್ಯಾನೇಜರ್, ಪ್ರಾದೇಶಿಕ ಮ್ಯಾನೇಜರ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ಧರು.