ಶೈಕ್ಷಣಿಕ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ: ಪ್ರಕಾಶ ಜಮಾದಾರ

ಅಫಜಲಪುರ:ಫೆ.8: ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಬದುಕಿನಲ್ಲಿ ಬಹಳ ಮಹತ್ವದ ಸ್ಥಾನ ಪಡೆದುಕೊಳ್ಳುತ್ತದೆ. ಹೀಗಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ ಪಾಠ ಬೋಧನೆ ಮಾಡಿ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಕಾಶ ಜಮಾದಾರ ಹೇಳಿದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24 ನೇ ಸಾಲಿನ ಸಾಂಸ್ಕøತಿಕ, ಎನ್‍ಎಸ್‍ಎಸ್, ಐಕ್ಯೂಎಸಿ, ಕ್ರೀಡಾ, ರೋವರ್ ಮತ್ತು ರೆಂರ್ಸ್, ರೆಡ್‍ಕ್ರಾಸ್ ಘಟಕಗಳ ಉದ್ಘಾಟನೆ ಹಾಗೂ ಬಿಎ, ಬಿಕಾಂ, ಬಿಎಸ್‍ಸಿ ಮತ್ತು ಎಂಎಸ್‍ಸಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಮೊದಲು ಅಫಜಲಪುರ ಪದವಿ ಕಾಲೇಜಿನಲ್ಲಿ ಸೌಲಭ್ಯಗಳಿಲ್ಲದ್ದರಿಂದ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಅಲ್ಲದೆ ಸೌಲಭ್ಯಗಳ ಕೊರತೆಯಿಂದಾಗಿ ಸಾಕಷ್ಟು ಸಮಸ್ಯೆಗಳು ಆಗುತ್ತಿದ್ದವು. ಆದರೆ ಈಗ ಎಲ್ಲಾ ರೀತಿಯ ಸೌಲಭ್ಯಗಳಿದ್ದು ವಿದ್ಯಾರ್ಥಿಗಳಿಗೆ ಯಾವ ಸಮಸ್ಯೆಗಳಿಲ್ಲದಂತೆ ಕಾಲೇಜು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದ ಅವರು ಇನ್ನೂ ಏನಾದರೂ ಸೌಲಭ್ಯಗಳ ಅವಶ್ಯಕತೆ ಇದ್ದರೆ ನಮ್ಮ ಗಮನಕ್ಕೆ ತನ್ನಿ, ಇಲ್ಲವಾದರೆ ಶಾಸಕರ ಗಮನಕ್ಕೆ ತಂದರೆ ಅವುಗಳನ್ನು ಸಹ ಪೂರೈಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗದಂತೆ ನೀವು ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಸೂಚಿಸಿದರು.

ನಿವೃತ್ತ ಪ್ರಾಚಾರ್ಯ ಡಾ. ಹನುಮಂತರಾವ್ ದೊಡ್ಮನಿ ಮಾತನಾಡುತ್ತಾ ಅಫಜಲಪುರ ಪಟ್ಟಣದಲ್ಲಿ ಪದವಿ ಕಾಲೇಜು ಆರಂಭಿಸುವಾಗ ಪಿಯು ಕಾಲೇಜಿನ 3 ಕೋಣೆಗಳಲ್ಲಿ ಆರಂಭವಾಗಿತ್ತು. ಈಗ ಹೊರ ವಲಯದಲ್ಲಿ ದೊಡ್ಡ ಕಾಲೇಜು ನಿರ್ಮಾಣವಾಗಿದೆ. ಎಲ್ಲಾ ರೀತಿಯ ಸೌಲಭ್ಯಗಳಿವೆ. ಹೀಗಾಗಿ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಮಾಣಿಕರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಾಲೇಜಿನಲ್ಲಿ ಈಗ ಎಲ್ಲಾ ರೀತಿಯ ಸೌಲಭ್ಯಗಳಿವೆ. ಇನ್ನೂ ಬೇಕಾದರೆ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಅಲ್ಲದೆ ಕಾಲೇಜಿನಲ್ಲಿ ಬೇಕಾದ ಉಪನ್ಯಾಸಕರು ಇದ್ದಾರೆ. ಹೀಗಾಗಿ ಯಾವ ಕೊರತೆಯೂ ಇಲ್ಲದೆ ಕಾಲೇಜು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವಿದ್ಯಾರ್ಥಿಗಳು ಇದರ ಲಾಭ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಿಬ್ಬಂದಿ ಕಾರ್ಯದರ್ಶಿ ಎಂ.ಎಸ್. ರಾಜೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಐಕ್ಯೂಏಸಿ ಸಂಯೋಜಕ ಡಾ.ಸಂತೋಷ ಹುಗ್ಗಿ, ಎನ್‍ಎಸ್‍ಎಸ್ ಅಧಿಕಾರಿ ಡಾ.ದತ್ತಾತ್ರೇಯ ಸಿ.ಹೆಚ್, ರೋರ್ಸ್ ಲೀಡರ್ ಡಾ.ಸೂಗುರೇಶ್ವರ ಆರ್.ಎಂ, ರೇಂಜರ್ಸ್ ಲೀಡರ್ ಶ್ರೀದೇವಿ ರಾಠೋಡ, ಕ್ರೀಡಾ ಮತ್ತು ಪ್ಲೇಸ್ಮೆಂಟ್ ಸಂಯೋಜಕ ಡಾ.ಮಹ್ಮದ್ ಯೂನುಸ್, ಗಣಕಶಾಸ್ತ್ರ ಮುಖ್ಯಸ್ಥ ಡಾ.ವಿನಾಯಕ ಜಿ.ಕೆ, ಆಂಗ್ಲ ವಿಭಾಗ ಮುಖ್ಯಸ್ಥೆ ಡಾ.ಶಾಂತಲಾ ಎ.ಸಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಭಾರತಿ ಎಂ.ಬಿ, ಮುಖಂಡರಾದ ದತ್ತಾತ್ರೇಯ, ಗೌತಮ ಸಕ್ಕರಗಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಸಾಂಸ್ಕೃತಿಕ ಸಂಯೋಜಕಿ ಡಾ. ಸಾವಿತ್ರಿ ಕೃಷ್ಣ ನಿರೂಪಿಸಿ ವಂದಿಸಿದರು.