ಶೈಕ್ಷಣಿಕ ಕ್ಷೇತ್ರದ ಹೊಂಬೆಳಕು ಆರ್.ವಿ. ಬಿಡಪ್ : ಬಸವರಾಜ ಜಾಬಶೆಟ್ಟಿ

ಬೀದರ: ಜ.2:ನಗರದಲ್ಲಿ ಐದು ದಶಕಗಳ ಹಿಂದೆ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ ಪ್ರಮುಖರಲ್ಲಿ ಒಬ್ಬರಾಗಿ ಸಂಸ್ಥೆಯ ಸಾರಥ್ಯವನ್ನು ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ದಿ. ಆರ್.ವಿ. ಬಿಡಪ್ ಅವರಿಗೆ ಸಲ್ಲುತ್ತದೆ. ದೂರದೃಷ್ಟಿ, ಸರಳ ಜೀವನ, ಉನ್ನತ ವಿಚಾರದ ಬಿಡಪ್ ಅವರು ಲಕ್ಷಾಂತರ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಒದಗಿಸಿಕೊಟ್ಟ ಶೈಕ್ಷಣಿಕ ಕ್ಷೇತ್ರದ ಹೊಂಬೆಳಕಾಗಿದ್ದಾರೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ನುಡಿದರು.

ಆರ್.ವಿ. ಬಿಡಪ್ ಅವರ 16 ನೇ ವರ್ಷದ ಪುಣ್ಯಸ್ಮರಣೆ ನಿಮಿತ್ಯ ನಗರದ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಸ್ಥಾಪಿಸಲಾದ ಬಿಡಪ್ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ನ್ಯಾಸದ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಡಪ್ ಅವರ ಶಿಕ್ಷಣದ ಕೊಡುಗೆ ಅಗಾಧವಾದುದು. ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳೆಂಬ ಮರದ ನೆರಳಿನಲ್ಲಿ ಲಕ್ಷಗಟ್ಟಲೆ ಮಕ್ಕಳು ಶಿಕ್ಷಣದಿಂದ ಉಜ್ವಲ ಭವಿಷ್ಯ ರೂಪಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ ಎಂದು ಸ್ಮರಿಸಿದರು. ಅವರು ಅಂದು ಸ್ಥಾಪಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕಾನೂನು ಪದವಿ, ಫಾರ್ಮಸಿ ಕಾಲೇಜು, ನಸಿರ್ಂಗ್ ಕಾಲೇಜು, ಕಲಾ, ವಿಜ್ಞಾನ, ವಾಣಿಜ್ಯ ಹೀಗೆ ಹಲವಾರು ವಿಷಯಗಳ ಪದವಿಯನ್ನು ವಿದ್ಯಾರ್ಥಿಗಳು ಪಡೆಯಲು ಸಹಕಾರಿಯಾಗಿದೆ ಎಂದರು.

ಇದೇ ವೇಳೆ ಕರಾಶಿ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ. ಶೆಟಕಾರ, ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಟ್ರಸ್ಟ್ ಕಾರ್ಯದರ್ಶಿ ಮಡಿವಾಳಪ್ಪ ಗಂಗಶೆಟ್ಟಿ, ನಿರ್ದೇಶಕರಾದ ಶ್ರೀನಾಥ ನಾಗೂರೆ, ಸಿದ್ಧರಾಜ ಪಾಟೀಲ, ಆಡಳಿತಾಧಿಕಾರಿ ಎಚ್.ಎಸ್.ಪಾಟೀಲ, ಕಾನೂನು ಮಹಾವಿದ್ಯಾಲಯದ ಪ್ರಚಾರ್ಯ ಮುನಿಯಪ್ಪ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಗನ್ನಾಥ ಹೆಬ್ಬಾಳೆ, ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಕಾಶಿನಾಥ ನೌಬಾದೆ, ನಸಿರ್ಂಗ್ ಕಾಲೇಜಿನ ಪ್ರಚಾರ್ಯ ಸಂತೋಷ ಸೋಮಾ, ಪ.ಪೂ. ಕಾಲೇಜಿನ ಪ್ರಚಾರ್ಯ ಡಾ. ಬಸವರಾಜ ಬಲ್ಲೂರ, ಕರ್ನಾಟಕ ಕಾಲೇಜಿನ ಉಪಪ್ರಾಂಶುಪಾಲರಾದ ಅನೀಲಕುಮಾರ ಚಿಕ್ಕಮಾಣೂರ, ಜಯಶ್ರೀ ಪಾಟೀಲ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.