ಶೈಕ್ಷಣಿಕ ಕಾಳಜಿಯ ಕಾರ್ಯಕ್ರಮ ಮಕ್ಕಳ ದಿನಾಚರಣೆಗೆ ಸಾರ್ಥಕತೆ ತಂದಿದೆ

ದಾವಣಗೆರೆ-ನ.೧೫: ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಕೇವಲ ವೇದಿಕೆಯ ವೈಭವೀಕರಣಕ್ಕೆ ಅಡಂಬರಕ್ಕೆ ಸೀಮಿತವಾಗದೆ ಕನ್ನಡ ಭಾಷೆಯನ್ನು ಅಂತರಾಳದಿAದ ಅರ್ಥೈಸಿಕೊಂಡು ಜೀವನ ಪರ್ಯಂತ ಅವಳಡಿಸಿಕೊಂಡಾಗ ಮಾತ್ರ ಕನ್ನಡ ಬಾಷೆಗೆ ಗೌರವ ಬರುತ್ತದೆ. ಈ ಸಂಸ್ಥೆಗಳು ಅಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ದಾವಣಗೆರೆ ನಗರಕ್ಕೆ ಹೆಮ್ಮೆ ತರುವಂತದ್ದು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮುಕ್ತವಾದ ವೇದಿಕೆ ಕಲ್ಪಿಸಿ ಅವರ ಮುಂದಿನ ದಿವ್ಯ ಭವ್ಯ ಭವಿಷ್ಯಕ್ಕೆ ಸಾಧನೆಗಳಿಗೆ ಪೂರಕವಾದ ಈ ಕಾರ್ಯಕ್ರಮ ನಿಜಕ್ಕೂ ಮಕ್ಕಳ ದಿನಾಚರಣೆಗೆ ಸಾರ್ಥಕತೆ ತಂದಿದೆ. “ದಾವಣಗೆರೆ ಸಾಂಸ್ಕೃತಿಕ ರಾಯಭಾರಿ” ಎಂದೇ ಪ್ರಖ್ಯಾತರಾಗಿರುವ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಸಾಧನೆ ಅವಿಸ್ಮರಣೀಯ ಎಂದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳು, ಶಿಕ್ಷಣ ತಜ್ಞರಾದ ಡಾ. ಹೆಚ್.ವಿ. ವಾಮದೇವಪ್ಪ ತಮ್ಮ ಅಂತರಾಳ ಭಾವನೆಗಳನ್ನು ವ್ಯಕ್ತಪಡಿಸಿದರು.ದಾವಣಗೆರೆಯ ಲಯನ್ಸ್ ಕ್ಲಬ್ ನೇಸರ ಮತ್ತು ಕಲಾಕುಂಚ ಎಂ.ಸಿ.ಸಿ. ಬಡಾವಣೆ ಶಾಖೆಯ ಸಂಯುಕ್ತಾಶ್ರಯದಲ್ಲಿ ನಿನ್ನೆ ದಿನ ನಗರದ ದೇವರಾಜ ಅರಸು ಬಡಾವಣೆಯ ಲಯನ್ಸ್ ಭವನದಲ್ಲಿ 67ನೇ ವರ್ಷದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಪ್ರೌಢಶಾಲಾ ಮಕ್ಕಳಿಗೆ “ದಾವಣಗೆರೆ ಕನ್ನಡ-ಕುವರಿ ಸ್ಪರ್ಧೆ”ಯ ಸಮಾರಂಭ ಜ್ಯೋತಿ ಬೆಳಗಿ ಕನ್ನಡ ಬಾವುಟ ಹಾರಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ನೇಸರ ಮತ್ತು ಕಲಾಕುಂಚ ಎಂ.ಸಿ.ಸಿ. ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಪ್ರಭಾ ರವೀಂದ್ರ ಮಾತನಾಡಿ, ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳ ಅರಿವೂ ಮೂಡಿಸುವ ಅವರ ಸಾಮಾನ್ಯ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ ಎಂದರು.ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕನ್ನಡ ನಾಡಗೀತೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಬೆಳ್ಳೂಡಿ ಶಿವಕುಮಾರ್‌ರವರ ಸ್ವಾಗತಿಸಿದರು, ದಾವಣಗೆರೆಯ ಇತಿಹಾಸ ಪರಂಪರೆಯ ಕುರಿತು ವಿವರಿಸಿದ ಸಾಲಿಗ್ರಾಮ ಗಣೇಶ್ ಶೆಣೈಯವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಗೌರವಾಧ್ಯಕ್ಷರಾದ ಶ್ರೀಮತಿ ವಸಂತಿ ಮಂಜುನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎನ್.ಆರ್.ನಾಗಭೂಷಣ್, ಶ್ರೀ ಕನ್ನಿಕಾಪರಮೇಶ್ವರಿ ಕೋ.ಬ್ಯಾಂಕಿನ ಅಧ್ಯಕ್ಷರಾದ ಆರ್.ಜಿ.ಶ್ರೀನಿವಾಸಮೂರ್ತಿ ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಲಯನ್ಸ್ ನೇಸರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರೇಣುಕಾ ಉದಯಕುಮಾರ್ ವಂದಿಸಿದರು, ನಂತರ ಮಕ್ಕಳ ವಿವಿಧ ಸ್ಪರ್ಧೆಗಳು ಮುಂದುವರಿಯಿತು.