ಭಾಲ್ಕಿ:ಜು.18: ತಾಲೂಕಿನಲ್ಲಿ ಸುಮಾರು ವರ್ಷಗಳ ಕಾಲ ಉತ್ತಮವಾಗಿ ಸೇವೆ ಸಲ್ಲಿಸಿರುವ ಇಲ್ಲಿಯ ಶಿಕ್ಷಕರು, ತಾವು ಯಾವ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಲಿದ್ದರೂ ಶೈಕ್ಷಣಿ ಅಭಿವೃದ್ಧಿಗಾಗಿ ಸದಾ ಶ್ರಮಿಸುವ ಕಾರ್ಯವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸೋಮವಾರ ನಡೆದ ಬೇರೆ ತಾಲೂಕುಗಳಿಗೆ ವರ್ಗವಾಗಿ ತೆರಳುತ್ತಿರುವ ಪ್ರೌಢಶಾಲಾ ಶಿಕ್ಷಕರಿಗೆ, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವರ್ಗವಾದ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವರ್ಗಾವಣೆ ಪ್ರಕ್ರಿಯೆ ಸಾಂಗವಾಗಿ ನಡೆದಿದೆ. ನಮ್ಮ ತಾಲೂಕಿನಿಂದ ಹಲವಾರು ಶಿಕ್ಷಕರು ತಮ್ಮ ಬೇಡಿಕೆಯಂತೆ ಸೇವೆ ಸಲ್ಲಿಸಲು ಬೇರೆ ಸ್ಥಳಗಳಿಗೆ ವರ್ಗವಾಗಿ ಹೋಗುತ್ತಿರುವುದು ಸಂತಸದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿಯೂ ತಾವು ಸೇವೆ ಸಲ್ಲಿಸುತ್ತಿರುವ ಸ್ಥಳಗಳಲ್ಲಿ ಶೈಕ್ಷಣ ಪ್ರಗತಿಗಾಗಿ ದುಡಿಯಬೇಕು. ಶಿಕ್ಷಕರು ಸದಾ ಕ್ರೀಯಾಶೀಲರಾಗಿರಬೇಕು, ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತಾತ್ರಿ ಕಾಟಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಬಾಲಾಜಿ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಖಜಾಂಚಿ ಬಸವರಾಜ ನೇಳಗೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೆಪ್ಪ ಪಾಟೀಲ ನೇತೃತ್ವದಲ್ಲಿ ವರ್ಗಾವಣೆಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಶಿವಕುಮಾರ ಫುಲಾರಿ, ಸಂಘದ ಪದಾಧಿಕಾರಿಗಳಾದ ಮಾಧವರಾವ ಸಿಂಧೆ, ಸೋಮನಾಥ ಪಾಟೀಲ, ಅರ್ಚನಾ ಪಾಟೀಲ, ಮಾಣಿಕ ಜಾಧವ, ಕಿರಣಕುಮಾರ ಭಾಟಸಿಂಗೆ, ಸಂಘದ ಗೌರವ ಸಲಹೆಗಾರ ಜಯರಾಜ ದಾಬಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.