
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಏ.28: ವಿದ್ಯಾರ್ಥಿಗಳು ಉತ್ತಮವಾಗಿ ಓದಿ, ಹೆಚ್ಚು ಅಂಕ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ, ಉದ್ಯೋಗ ಪಡೆದು, ಹಣಗಳಿಕೆ ಮಾಡುವಂತರಾದಾಗ ಮಾತ್ರ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬದಲಾವಣೆ ಆಗಲು ಸಾಧ್ಯ ಎಂದು ಶಾಲೆಯ ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ಮಕ್ಕಳು 2022-23ನೇ ಸಾಲಿನಲ್ಲಿ ನಡೆದ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಭಾಗವಹಿಸಿ ಆಯ್ಕೆಗೊಂಡ ಹೆಚ್.ಪ್ರವೀಣ ಹಾಗೂ ಜೆ.ವಿನೋದ್ ಕುಮಾರ್ ಅವರನ್ನು ಸನ್ಮಾನಿಸಿ,ಗೌರವಿಸಿ ಮಾತನಾಡಿದ ಅವರು ಇಬ್ಬರು ಮಕ್ಕಳು ಮೆರಿಟ್ ಸ್ಕಾಲರ್ಶಿಪ್ ಗೆ ಆಯ್ಕೆಗೊಂಡಿರುವುದು ಸಂತಸ ತಂದಿದೆ. ಮುಂದಿನ ವರ್ಷ ಇದಕ್ಕಿಂತ ಹೆಚ್ಚಿನ ಮಕ್ಕಳು ಆಯ್ಕೆಗೊಳ್ಳಬೇಕು ಎಂದು ಹೇಳಿದರು.
ಎಸ್. ಡಿ.ಎಂ.ಸಿ ಅಧ್ಯಕ್ಷ ದೊಡ್ಡ ಕುಮಾರ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರೆ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಲತಾ ಪೂಜೆ ನೆರವೇರಿಸಿದರು. ನಂತರ ಮಾತನಾಡಿ ವಿದ್ಯಾರ್ಥಿಗಳು ಉನ್ನತ ಗುರಿಹೊಂದಿರಬೇಕು.ಶಾಲೆಯಲ್ಲಿ ಶಿಕ್ಷಕರು ಹೇಳಿದರು ಪಾಠಗಳನ್ನು ಸಮರ್ಪಕವಾಗಿ ಮುಗಿಸಿ, ಉತ್ತಮ ಅಂಕ ಪಡೆದು, ಉದ್ಯೋಗ ಗಳಿಸಿ ಊರಿಗೆ ಹೆಸರು ತರಬೇಕು ಎಂದು ಹೇಳಿದರು.
ಶಿಕ್ಷಕರಾದ ರಾಮಾಂಜಿನೇಯ, ಆರೋಗ್ಯ ಇಲಾಖೆ ಹಿರಿಯ ಸಹಾಯಕರಾದ ಕಿರಣ ಹಾಗೂ ಪಂಚಾಯತ್ ಬಿಲ್ ಕಲೆಕ್ಟರ್ ಬಾಷ ಮುಂತಾದವರು ಉಪಸ್ಥಿತರಿದ್ದರು.