ಶೇ 85 ಕ್ಕಿಂತ ಹೆಚ್ಚು ಮತದಾನವಾಗುವಂತೆ ಟಾರ್ಗೇಟ್ ನೀಡಿದ ಸಿಇಓ

 

ಸಂಜೆವಾಣಿ ವಾರ್ತೆ
ದಾವಣಗೆರೆ ಏ.೪; ಪ್ರಸ್ತುತ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಸರಾಸರಿಗಿಂತ ಕಡಿಮೆ ಮತದಾನವಾಗಿದ್ದು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ 85 ಕ್ಕಿಂತ ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಶೇ 72.96 ರಷ್ಟು ಮತದಾನವಾಗಿತ್ತು. ಆದರೆ ಅತ್ಯಂತ ಕಡಿಮೆ ಮತದಾನವಾಗಿದ್ದು ದಾವಣಗೆರೆ ಉತ್ತರ ಶೇ 65.71, ದಕ್ಷಿಣ ಶೇ 65.93 ರಷ್ಟು ಮತದಾನವಾಗಿದೆ. ಇದು ಈ ಚುನಾವಣೆಯಲ್ಲಿ ಶೇ 85 ಕ್ಕಿಂತಲೂ ಹೆಚ್ಚು ಮತದಾನವಾಗಬೇಕೆಂಬುದು ಕ್ಷೇತ್ರದ ಗುರಿಯಾಗಿದೆ ಎಂದರು.ದಾವಣಗೆರೆ ಉತ್ತರದಲ್ಲಿ 245 ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 217 ಮತಗಟ್ಟೆಗಳಿವೆ. 2019 ರ ಚುನಾವಣೆಯ ಸರಾಸರಿ ಮತದಾನಕ್ಕಿಂತಲೂ ಶೇ 20 ರಷ್ಟು ಕಡಿಮೆ 9 ಮತಗಟ್ಟೆ, ಶೇ 15 ರಷ್ಟು ಕಡಿಮೆ 40 ಮತಗಟ್ಟೆ, ಶೇ 10 ರಷ್ಟು ಕಡಿಮೆ 135 ಮತಗಟ್ಟೆಗಳಲ್ಲಿ ಮತದಾನವಾಗಿದೆ. ಇವು ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗಿಂತ ಕಡಿಮೆ ಮತದಾನವಾದ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ 2024 ರ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡಿದಲ್ಲಿ ಶೇ 85 ಕ್ಕಿಂತ ಹೆಚ್ಚು ಮತದಾನವಾಗಲು ಸಾಧ್ಯವಿದೆ. ಎಲ್ಲಾ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಸಂಗ್ರಹಿಸಿ ಚುನಾವಣೆ ನಡೆಯುವ ಮೇ 7 ರಂದು ತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡಲು ತಿಳಿಸುವ ಕೆಲಸವನ್ನು ಮತಗಟ್ಟೆ ಅಧಿಕಾರಿಗಳು ಮಾಡಬೇಕಾಗಿದೆ ಎಂದರು.