ಶೇ. 80 ರಷ್ಟು ರಸ್ತೆಗಳು ಕಾಂಕ್ರೀಟಿಕರಣ- ಅಬ್ಬಯ್ಯ

ಹುಬ್ಬಳ್ಳಿ, ಏ3: ನೇಕಾರ ನಗರದಲ್ಲಿ ಕಳೆದ 20-30 ವರ್ಷಗಳಲ್ಲಿ ಆಗದಷ್ಟು ಅಭಿವೃದ್ಧಿ ಕೆಲಸಗಳನ್ನು ನನ್ನ ಅವಧಿಯಲ್ಲಿ ಕೈಗೊಂಡಿದ್ದು, ಈಗಾಗಲೇ ಈ ಭಾಗದ ಶೇ. 80ರಷ್ಟು ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
ಲೋಕೋಪಯೋಗಿ ಇಲಾಖೆಯ 70 ಲಕ್ಷ ರೂ. ಅನುದಾನದಲ್ಲಿ ಕೈಗೊಂಡಿರುವ ಹಳೇ ಹುಬ್ಬಳ್ಳಿ ನೇಕಾರ ನಗರ ವೃತ್ತದಿಂದ ತಿಮ್ಮಸಾಗರ ಮುಖ್ಯರಸ್ತೆವರೆಗಿನ ಸಿಸಿ ರಸ್ತೆ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು.
ಸಿಸಿ ರಸ್ತೆ, ಯುಜಿಡಿ, ಕುಡಿಯುವ ನೀರಿನ ಸೌಲಭ್ಯ, ಬೀದಿದೀಪ ಅಳವಡಿಕೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ನೇಕಾರ ನಗರ ಭಾಗದ ಬಹುತೇಕ ಕಾಲನಿಗಳನ್ನು ಸುಂದರವಾಗಿ ಅಭಿವೃದ್ಧಿಪಡಿಸಿದ್ದು, ನಾಲಾಕ್ಕೆ ತಡೆಗೋಡೆ ಸೇರಿದಂತೆ ಇನ್ನುಳಿದ ಕಾಮಗಾರಿಗಳನ್ನು ಶೀಘ್ರ ಆರಂಭಿಸಿ ಈ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದರು.
ನೇಕಾರ ನಗರ ಮುಖ್ಯರಸ್ತೆ ಕಾಮಗಾರಿ ಇದೀಗ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಯುಜಿಡಿ, ಕುಡಿಯುವ ನೀರಿನ ಪೈಪ್‍ಲೈನ್ ಸೇರಿದಂತೆ ಇನ್ನಿತರೆ ಕಾಮಗಾರಿ ಕೈಗೊಳ್ಳಲು ಅನುಕೂಲವಾಗುವಂತೆ ಮುಖ್ಯರಸ್ತೆಯ ಪ್ರತಿ 50 ಮೀ. ಅಂತರದಲ್ಲಿ ಪೇವರ್ಸ್ ಅಳವಡಿಸುವಂತೆ ಹಾಗೂ ರಸ್ತೆಯ ಎರಡೂ ಬದಿಯಲ್ಲಿ ಮೋರಂ ಹಾಕಿ ಒಳರಸ್ತೆಗಳ ಸಂಪರ್ಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ರಾಕೇಶ ಪಲ್ಲಾಟೆ, ಬಾಗಣ್ಣ ಬಿರಾಜದಾರ, ಕಾಶಿನಾಥ ಪವಾರ್, ಶೋಭಾ ಕಮತರ, ಶಿವು ಮಡಿವಾಳರ, ಮಂಜುನಾಥ ಕಾಟಿಗರ, ಸಂಜಯ ಕಲ್ಯಾಣವರ, ಮಾರುತಿ ಗಾಯಕವಾಡ, ಪ್ರಸನ್ನ ಮಿರಜಕರ್, ಬಸವರಾಜ ಯರಿಬೈಲ್, ಸುಮಿತ್ರಾ ಕೊಪ್ಪದ, ವಸಂತಪ್ಪ ಪೂಜಾರ, ಲೋಕೋಪಯೋಗಿ ಇಲಾಖೆಯ ಶ್ರೀದೇವಿ ಧೂಪದ, ಇತರರು ಇದ್ದರು.