ಶೇ 5 ಜಿಎಸ್ಟಿಗೆ ವಿರೋಧ: ಎಪಿಎಂಸಿ ವಹಿವಾಟು ಸ್ಥಗಿತ

ಕಲಬುರಗಿ ಜು 16: ಜೋಳ,ಅಕ್ಕಿ, ರಾಗಿ ಮೊದಲಾದ ಆಹಾರ ಧಾನ್ಯಗಳ ಮೇಲೆ ಕೇಂದ್ರ ಜಿ.ಎಸ್.ಟಿ. ಮಂಡಳಿಯು ಶೇಕಡಾ 5 ರಷ್ಟು ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ಇಂದು ಎ.ಪಿ.ಎಂ.ಸಿ. ವರ್ತಕರು ಹಾಗೂ ಕಾರ್ಮಿಕರು ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಲಬುರಗಿಯ ಎಪಿಎಂಸಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತು.
ಸದಾ ಜನಜಂಗುಳಿಯಿಂದ ಗಿಜಗುಡುತ್ತಿದ್ದ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಜನಸಂಚಾರ ವಿರಳವಾಗಿತ್ತು.ಕಾರ್ಮಿಕರು ಗೋದಾಮುಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವ ನೋಟ ಕಂಡು ಬಂದಿತು.
ರೈತರು ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಸಿಗದ ಪರಿಣಾಮ ರೈತರ ಸ್ಥಿತಿ ಶೋಚನೀಯವಾಗಿದೆ.ಜೊತೆಗೆ ರೈತ ಕೃಷಿ ಕಾರ್ಮಿಕರ ಆದಾಯ ದಿನದಿಂದ ದಿನಕ್ಕೆ ಕುಸಿಯತೊಡಗಿದೆ. ಈಗ ಮತ್ತೆ ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸುವ ಕ್ರಮಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಅಗತ್ಯ ವಸ್ತುಗಳು ಜನ ಸಾಮಾನ್ಯರಿಗೆ ದಿನ ನಿತ್ಯ ಬದುಕು ಸಾಗಿಸಲು ಅವಶ್ಯಕವಾದುದರಿಂದ 1983 ರಿಂದಲೂ ಅವುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಸರಕಾರದ ಈ ನೀತಿಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಮತ್ತೆ ದುಬಾರಿಯಾಗಲಿದೆ. ಆದ ಕಾರಣ ಆಹಾರ ಧಾನ್ಯಗಳ ಮೇಲಿನ ಈ ತೆರಿಗೆ ನೀತಿಯನ್ನು ಸರಕಾರ ಈ ಕೂಡಲೇ ವಾಪಸ್ಸು ಪಡೆಯಬೇಕೆಂದು ವರ್ತಕರು ಕಾರ್ಮಿಕರು ಆಗ್ರಹಿಸಿದ್ದಾರೆ