ಶೇ. 5ರಷ್ಟು ಜಿಎಸ್‍ಟಿ ತೆರಿಗೆಗೆ ಎಸ್‍ಯುಸಿಐ(ಸಿ) ಖಂಡನೆ

ಕಲಬುರಗಿ.ಜು.15: ಅಕ್ಕಿ, ಜೋಳ, ರಾಗಿ ಮುಂತಾದ ಆಹಾರ ಧಾನ್ಯಗಳ ಮೇಲೆ, ಮೊಸರಿನಂತಹ ಡೈರಿ ಉತ್ಪನ್ನಗಳ ಮೇಲೆ ಕೇಂದ್ರ ಜಿಎಸ್‍ಟಿ ಮಂಡಳಿಯು ಶೇಕಡಾ 5ರಷ್ಟು ತೆರಿಗೆ ವಿಧಿಸಿರುವುದು ಖಂಡನಾರ್ಹ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅವರು ತಿಳಿಸಿದ್ದಾರೆ.
ಈಗಾಗಲೇ ಬೆಲೆ ಏರಿಕೆ, ಹಣದುಬ್ಬರಗಳಿಂದ ಜನತೆ ತತ್ತರಿಸಿದ್ದಾರೆ. ಬೆಲೆ ಏರಿಕೆಯ ಪ್ರಮಾಣದಲ್ಲಿ ಜನಸಾಮಾನ್ಯರ ಆದಾಯ ಹೆಚ್ಚಳವಾಗಿಲ್ಲ. ಈಗ ತಿನ್ನುವ ಅನ್ನದ ಮೇಲೂ ವಿಧಿಸುವ ಕ್ರೂರ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿಕೆಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಜುಲೈ 18ರಿಂದ ಜಾರಿಗೆ ಬರುವ ತೆರಿಗೆಯ ಪರಿಣಾಮವಾಗಿ ಅಕ್ಕಿಗೆ ಕಿಲೋವೊಂದಕ್ಕೆ 3ರಿಂದ 4 ರೂ.ಗಳು ಏರಿಕೆಯಾಗಲಿದೆ. ಮೊಸರಿಗೂ ಪ್ರತಿ ಲೀಟರ್‍ಗೆ 2ರಿಂದ 3ರೂ.ಗಳು ಹೆಚ್ಚಳವಾಗಲಿದೆ. ಇದರಿಂದ ಗ್ರಾಹಕರು ಮತ್ತು ರೈತರಿಬ್ಬರಿಗೂ ತೊಂದರೆಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಆಹಾರ ಪದಾರ್ಥಗಳ ವ್ಯಾಪಾರದಲ್ಲಿಯೂ ಕಾರ್ಪೋರೇಟ್ ಕಂಪೆನಿಗಳಿಗೆ ಅನುಕೂಲ ಮಾಡುವುದಕ್ಕಾಗಿ ಇಂತಹ ತೀರ್ಮಾನ ಕೈಗೊಂಡಿರುವುದು ಜನರಿಗೆ ಬಗೆದ ದ್ರೋಹವಲ್ಲದೇ ಮತ್ತೇನೂ ಅಲ್ಲ. ಜೀವನಾವಶ್ಯಕ ವಸ್ತುಗಳ ಮೇಲಿನ ತೆರಿಗೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದಕ್ಕಾಗಿ ರಾಜ್ಯದ ಜನತೆ ಪ್ರಬಲ ಹೋರಾಟಕ್ಕೆ ಮುಂದಾಗಬೇಕು. ರಾಜ್ಯವ್ಯಾಪಿ ಮುಷ್ಕರಕ್ಕೆ ಮನವಿ ಮಾಡಿರುವ ಅವರು, ಇದೇ ಜಯಲೈ 15 ಮತ್ತು 16ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವರ್ತಕರು ಮತ್ತು ಕಾರ್ಮಿಕರು ನಡೆಸುತ್ತಿರುವ ರಾಜ್ಯವ್ಯಾಪಿ ಪಕ್ಷ ಸಂಪೂರ್ಣ ಬೆಂಬಲಿಸುತ್ತದೆ ಎಂದು ಘೋಷಿಸಿದ್ದಾರೆ.