ಶೇ. 30 ರಷ್ಟು ವೇತನ ಏರಿಕೆ ಅಸಾಧ್ಯ: ಸವದಿ

ಬೀದರ್, ಏ. ೮- ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಶೇ. ೩೦ ರಷ್ಟು ವೇತನ ಏರಿಕೆ ಅಸಾಧ್ಯ. ಮಾತುಕತೆಗಳ ಮೂಲಕ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಸಿದ್ಧವಿದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಹೇಳಿದ್ದಾರೆ.
ಸಾರಿಗೆ ನೌಕರರು ಸಂಸ್ಥೆಯ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಕೋವಿಡ್‌ನಿಂದ ಸಂಸ್ಥೆಗೆ ಸಾಕಷ್ಟು ನಷ್ಟವಾಗಿದೆ. ಸಂಪನ್ಮೂಲ ಕೊರತೆ ಇದೆ. ಸರ್ಕಾರದಿಂದಲೂ ಈಗಾಗಲೇ ೨ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನೆರವು ಪಡೆದಿದ್ದೇವೆ ಎಂದು ಅವರು ಹೇಳಿದರು.
ನೌಕರರು ಹಠಮಾರಿ ಧೋರಣೆ ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕು. ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಸಮಯ ಬೇಕಾಗುತ್ತದೆ. ಮುಂದೆ ಕುಳಿತು ಎಲ್ಲ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು, ಅದೇನು ದೊಡ್ಡದಲ್ಲ ಎಂದರು.
ಸಾರಿಗೆ ನೌಕರರು ಶೇ. ೩೦ ರಷ್ಟು ವೇತನ ಏರಿಕೆ ಕೇಳುತ್ತಿದ್ದಾರೆ. ಇದಕ್ಕೆ ಹಣ ಎಲ್ಲಿಂದ ತರುವುದು. ಸಂಸ್ಥೆಗೆ ಆದಾಯವೇ ಕಡಿಮೆಯಾಗಿದೆ. ಸಾರಿಗೆ ಸಂಸ್ಥೆಯ ಬ್ಯಾಲೆನ್ಸ್ ಶೀಟ್‌ನ್ನೇ ನೌಕರರ ಮುಂದೆ ಇಡಲು ಸಿದ್ಧರಿದ್ದೇವೆ. ನೌಕರರೇ ಬ್ಯಾಲೆನ್ಸ್ ಶೀಟ್‌ನ್ನು ಪರಿಶೀಲಿಸಿ ಅವರ ಬೇಡಿಕೆಗಳು ಇಂತಹ ಆರ್ಥಿಕ ಸಂಕಷ್ಟ ಸಮಯದಲ್ಲಿ ಪರಿಹರಿಸಲು ಸಾಧ್ಯವೇ ಎಂಬುದನ್ನು ಅರಿತುಕೊಳ್ಳಲಿ. ಮೊದಲು ಕೆಲಸಕ್ಕೆ ಹಾಜರಾಗಿ ನಂತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಬಳಿಕ ನೌಕರರ ವೇತನ ಸಂಬಂಧ ತೀರ್ಮಾನ ಮಾಡೋಣ ಎಂದು ಅವರು ಬೀದರ್‌ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಈಗಾಗಲೇ ನೌಕರರ ಬೇಡಿಕೆ ಸಂಬಂಧ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಶೇ. ೮ ರಷ್ಟು ವೇತನ ಹೆಚ್ಚಳಕ್ಕೆ ತೀರ್ಮಾನ ತೆಗೆದುಕೊಂಡಿದ್ದಾರೆ. ಇಂತಹ ಕಠಿಣ ಆರ್ಥಿಕ ಸಂಕಷ್ಟದ ಸಮಯದಲ್ಲೂ ನೌಕರರ ವೇತನ ಏರಿಕೆ, ಬೇಡಿಕೆಗೆ ಸ್ಪಂದಿಸಿದ್ದೇವೆ. ಇದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದರು.
ಇಂದು ಖಾಸಗಿ ಬಸ್‌ಗಳ ಓಡಾಟವನ್ನು ಹೆಚ್ಚು ಮಾಡಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಮುಷ್ಕರ ನಿರತ ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಹೇಳಿಕೆ ನೀಡಿದ್ದಾರೆ. ಎಲ್ಲವನ್ನು ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದರು.
ಸಾರಿಗೆ ನೌಕರರ ಮುಷ್ಕರ ಎರಡನೇ ದಿನವೂ ಮುಂದುವರೆದ ಹಿನ್ನೆಲೆಯಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪನವರು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಕೆಲ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ ಸವದಿ ಹೇಳಿದರು.