ಶೇ.17ರ ಪರಿಹಾರ ನಿಧಿಗೆ ಆದೇಶ: ಸಿಂಪಿ ಸಂತಸ

ಕಲಬುರಗಿ,ಸೆ.23-ರಾಜ್ಯದ ಪೌರಸೇವಾ ವೃಂದದ ಅಧಿಕಾರಿ/ನೌಕರರು/ ಪೌರ ಕಾರ್ಮಿಕ ನಿವೃತ್ತ ನೌಕರರಿಗೆ ಮತ್ತು ಕುಟುಂಬ ಪಿಂಚಣಿದಾರರಿಗೆ ಕಳೆದ ನಾಲ್ಕು ತಿಂಗಳಿಂದ ಸಿಗಬೇಕಾಗಿದ್ದ 7ನೇ ವೇತನದ ಮಧ್ಯಂತರ ಪರಿಹಾರ ನಿಧಿ ಶೇ.17 ವಿಸ್ತರಣೆಗೊಳಿಸಿ ಒಂದೇ ದಿನದಲ್ಲಿ ಮಂಜೂರಿ ಆದೇಶ ಹೊರಡಿಸಿದ ರಾಜ್ಯ ಸರಕಾರದ ಆರ್ಥಿಕ ಇಲಾಖೆ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಅಜಯ ನಾಗಭೂಷಣ ಅವರನ್ನು ಮತ್ತು ಪೌರಾಡಳಿತ ನಿರ್ದೇಶನಾಲಯದ ಆಯುಕ್ತರಾದ ಕು.ಮಂಜುಶ್ರೀ ಅವರನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ಒಕ್ಕೂಟದ ಅಧ್ಯಕ್ಷ ವೀರಭದ್ರ ಸಿಂಪಿ ಅಭಿನಂದಿಸಿದ್ದಾರೆ.
7ನೇ ವೇತನದ ಮಧ್ಯಂತರ ಪರಿಹಾರ ನಿಧಿ ಶೇ.17ನ್ನು ರಾಜ್ಯ ಸರಕಾರಿ ನೌಕರರಿಗೆ ಮೇ ತಿಂಗಳಿಂದ ಜಾರಿ ಮಾಡಲಾಗಿತ್ತು. ಆದರೆ, ಸ್ಥಳಿಯ ಸಂಸ್ಥೆಗಳ ಪೌರಸೇವಾ ವೃಂದದ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ ನೌಕರರಿಗೆ ಇದರ ಸೌಲಭ್ಯ ನೀಡಿರಲಿಲ್ಲ. ಸಂಬಂಧಿಸಿದ ಇಲಾಖೆ ಕಾರ್ಯದರ್ಶಿಗಳಲ್ಲಿ ಈ ವಿಳಂಬವನ್ನು ಪರಿಹರಿಸಲು ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲರು ಗಮನಕ್ಕೆ ತರಲಾಗಿತ್ತು. ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರ ಕಾರ್ಮಿಕರ ಸಂಘ ಮತ್ತು ರಾಜ್ಯದ ಮಹಾನಗರ ಪಾಲಿಕೆಗಳ ನಿವೃತ್ತ ನೌಕರರ ಸಂಘಗಳು ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಪ್ರತ್ಯೇಕವಾಗಿ ಮನವಿಗಳನ್ನು ಸಲ್ಲಿಸುವ ಮೂಲಕ ಒತ್ತಡ ಹೇರಿದ್ದವು. ಕಲಬುರಗಿಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ ಮತ್ತು ನಗರಾಭಿವೃದ್ಧಿ ಇಲಾಖೆ ಸರಕಾರದ ಕಾರ್ಯದರ್ಶಿ ಡಾ.ಅಜಯ್ ನಾಗಭೋಷಣ ಅವರಿಗೆ ಒಕ್ಕೂಟದ ಮೂಲಕ ಮನವಿಪತ್ರ ಸಲ್ಲಿಸಿ ಒತ್ತಾಯಿಸಲಾಗಿತ್ತು. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ವಿಳಂಬವಾಗುವುದನ್ನು ತಪ್ಪಿಸಿ, ಶೇ.17ರ ಪರಿಹಾರ ನಿಧಿಗೆ ಆದೇಶಿಸಿದೆ. ಈಗ ರಾಜ್ಯ ಪಿಂಚಣಿ ಇಲಾಖೆಯು ಸಂಚಿತ ನಿಧಿಯಿಂದ ಸೆಪ್ಟೆಂಬರ್ ತಿಂಗಳಿಂದಲೇ ಜಾರಿ ಬರುವಂತೆ ಅಗತ್ಯ ಕ್ರಮಕೈಗೊಂಡು ಏಪ್ರಿಲ್ ತಿಂಗಳಿಂದ ಬರಬೇಕಾದ ಶೇ.17ರ ಮಧ್ಯಂತರ ಪರಿಹಾರ ನಿಧಿ ಜಾರಿಗೊಳಿಸಬೇಕು ಮತ್ತು 7ನೇ ವೇತನ ಜಾರಿಗೊಳಿಸುವಲ್ಲಿ ಈ ಸಮಸ್ಯಗಳಾಗದಂತೆ ಪರಿಹರಿಸಬೇಕೆಂದು ವೀರಭದ್ರ ಸಿಂಪಿ ಒತ್ತಾಯಿಸಿದ್ದಾರೆ.