ಶೇ.15ರಷ್ಟು ಮಾತ್ರ ಕೋವಿಡ್ ಲಸಿಕೆ: ಅರಳಿ ಆರೋಪ

ಬೀದರ:ಮೇ.28: ಜಿಲ್ಲೆಯಲ್ಲಿ ಶೇ 15.54 ರಷ್ಟು ಜನರಿಗೆ ಮಾತ್ರ ಕೋವಿಡ್ ಲಸಿಕೆ ಕೊಡಲಾಗಿದ್ದು, ಇದು ಜಿಲ್ಲೆಯ ಜನರ ದೌರ್ಭಾಗ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಒಟ್ಟು 17.03 ಲಕ್ಷ ಜನಸಂಖ್ಯೆಯಲ್ಲಿ 12,25,347 ಜನ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಅದರಲ್ಲಿ 4,31,299 ಜನ 45 ವರ್ಷ ಮೇಲ್ಪಟ್ಟವರಾಗಿದ್ದಾರೆ. ಈ ಪೈಕಿ 1,86,226 ಜನರಿಗೆ ಲಸಿಕೆಯ ಮೊದಲ ಡೋಸ್ ಕೊಡಲಾಗಿದೆ. ಇನ್ನೂ 2,45,073 ಜನರಿಗೆ ಲಸಿಕೆ ಕೊಡಬೇಕಿದೆ 54,522 ಜನ ಎರಡನೇ ಡೋಸ್ ಪಡೆದಿದ್ದು, 1,31,704 ಜನ ಬಾಕಿ ಇದ್ದಾರೆ ಎಂದು ಹೇಳಿದ್ದಾರೆ.

18 ರಿಂದ 44 ವಯೋಮಾನದ 7,94,048 ಜನರಿದ್ದಾರೆ. ಇವರಲ್ಲಿ ಈವರೆಗೆ 4,253 ಜನರಿಗೆ ಲಸಿಕೆ ನೀಡಲಾಗಿದೆ. ಇನ್ನೂ 7,89,795 ಜನ ಲಸಿಕೆ ಕೊಡಬೇಕಾಗಿದೆ.ಜಿಲ್ಲೆಗೆ ಸರ್ಕಾರದಿಂದ ಈವರೆಗೆ 3,25,060 ಡೋಸ್ ಲಸಿಕೆಗಳು ಬಂದಿವೆ. ಜಿಲ್ಲೆಯಲ್ಲಿ 70 ಲಸಿಕಾ ಕೇಂದ್ರಗಳಿದ್ದು, ಒಂದು ಕೇಂದ್ರದಲ್ಲಿ ನಿತ್ಯ 150 ರಿಂದ 200 ಜನರಿಗಷ್ಟೇ ಲಸಿಕೆ ಕೊಡುವ ವ್ಯವಸ್ಥೆ ಇದೆ. ಅಗತ್ಯ ಲಸಿಕೆ ಸರಬರಾಜು ಆಗದ ಕಾರಣ ಈವರೆಗೆ ಕೇವಲ ಶೇ 15.54 ರಷ್ಟು ಜನ ಮೊದಲ ಡೋಸ್ ತೆಗೆದುಕೊಂಡಿದ್ದು, ಎರಡನೇ ಡೋಸ್ ಪಡೆದವರ ಸಂಖ್ಯೆ ಶೇ 4.50 ಮಾತ್ರ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಕ್ಕೆ ಮನವರಿಕೆ ಮಾಡಿ ಲಸಿಕೆ ತರಿಸಿಕೊಟ್ಟರಷ್ಟೇ ಜಿಲ್ಲಾ ಅಡಳಿತ ಕಾರ್ಯಗತಗೊಳಿಸಲು ಸಾಧ್ಯವಾಗಲಿದೆ. ಆದರೆ, ಕಾಲಹರಣ ನೀತಿಗೆ ಅನೇಕರು ಬಲಿಯಾಗುತ್ತಿದ್ದಾರೆ. ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ಇದಕ್ಕೆ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಲಸಿಕೆ ಪಡೆದರೆ ಕೋವಿಡ್ ಬರುವುದಿಲ್ಲವೆಂದೇನೂ ಇಲ್ಲ. ಬಂದರೂ, ಸಾವು ಸಂಭವಿಸುವುದನ್ನು ತಡೆಯಬಹುದು. ಹೀಗಾಗಿ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಆದರೆ, ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಪಾದಿಸಿದ್ದಾರೆ.

ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಜಿಲ್ಲೆಯಲ್ಲಿ ಲಾಕ್‍ಡೌನ್‍ಗಿಂತ ಮುಂಚೆ ಅಂದರೆ ಮಾರ್ಚ್ 26 ರಿಂದ ಏಪ್ರಿಲ್ 26 ರವರೆಗೆ 1,02,003 ಜನರ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ 8,283 ಮಂದಿಗೆ ಸೋಂಕು ದೃಢಪಟ್ಟಿತ್ತು. 8,207 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. 76 ಜನ ಮೃತಪಟ್ಟಿದ್ದರು. ಆದರೆ, ಲಾಕ್‍ಡೌನ್ ನಂತರ ಪರೀಕ್ಷೆಗಳು ಕಡಿಮೆಯಾಗಿವೆ ಎಂದು ತಿಳಿಸಿದ್ದಾರೆ.

ಸರ್ಕಾರ ಕೇವಲ ನಾಟಕ ಮಾಡುತ್ತಿದೆ. ಅದಕ್ಕೆ ಜನಪರ ಕಾಳಜಿ ಇಲ್ಲ. ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ಸಾರ್ವಜನಿಕರೇ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.