ಶೇ.100 ರಷ್ಟು ಲಸಿಕೆ ಯಾಕೆ ಕೊಳ್ಳುತ್ತಿಲ್ಲ: ಕೇಂದ್ರಕ್ಕೆ ಸುಪ್ರೀಂ ತಪರಾಕಿ

ನವದೆಹಲಿ, ಏ.30- ದೇಶಾದ್ಯಂತ ಕೊರೋನಾ ಸೋಂಕಿಗೆ ಲಸಿಕೆ ಹಾಕುವ ಅಭಿಯಾನವನ್ನು ಯಾಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ಶೇಕಡ ನೂರರಷ್ಟು ಲಸಿಕೆ ಕೊಳ್ಳಲು ಯಾಕೆ ಆಗಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.

ನೇರವಾಗಿ ಲಸಿಕೆ ಉತ್ಪಾದಕರಿಂದ ಒಂದೇ ಬೆಲೆಗೆ ಖರೀದಿ ಮಾಡದೆ ರಾಜ್ಯಗಳಿಗೆ ಒಂದು ಬೆಲೆ ,ಕೇಂದ್ರಕ್ಕೆ ಇನ್ನೊಂದು ಬೆಲೆ ಹಾಗು ಖಾಸಗಿ ಆಸ್ಪತ್ರೆಗಳಿಗೆ ಮತ್ತೊಂದು ಬೆಲೆ ಯಾಕೆ ನಿಗದಿಪಡಿಸಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ, ಕೊರೋನ ಸೋಂಕಿನ ಲಸಿಕೆಯನ್ನು ವಿಭಿನ್ನ ಬೆಲೆಗೆ ನೀಡುವ ಕ್ರಮವನ್ನು ಪ್ರಶ್ನಿಸಿದೆ‌.

ಇದೇ ವೇಳೆ ನ್ಯಾಯಮೂರ್ತಿ ನಾಗೇಶ್ವರ್ ರಾವ್ ಮತ್ತು ರವೀಂದ್ರ ಭ್ ಅವರನ್ನೊಳಗೊಂಡ ನ್ಯಾಯಪೀಠ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ದೇಶದ ಜನರ ಆರೋಗ್ಯ ಮುಖ್ಯ ಈಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ಗಮನ ಹರಿಸುವ ಅಗತ್ಯವಿದೆ ಕೇಂದ್ರ ಸರ್ಕಾರ, ಔಷಧ ತಯಾರಿಕಾ ಸಂಸ್ಥೆಗಳಿಂದ ಲಸಿಕೆಯನ್ನು ಒಂದೇ ಬೆಲೆಗೆ ಯಾಕೆ ಖರೀದಿ ಮಾಡುತ್ತಿಲ್ಲ ಎಂದು ಕೂಡ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದೆ.

ಜನರ ಆರೋಗ್ಯ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ಲಸಿಕಾ ಉತ್ಪಾದಕ ಸಂಸ್ಥೆಗಳಿಗೆ ಹಣ ನೀಡಿ ಲಸಿಕೆಯನ್ನು ಖರೀದಿ ಮಾಡಿ ಅದನ್ನು ಜನರಿಗೆ ನೀಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಎಷ್ಟು ಹಣ ಖರ್ಚು ಮಾಡಿದ್ದೀರಾ:

ಕೊರೋನೋ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವ ಸಂಶೋಧನಾ ಸಂಸ್ಥೆಗಳಿಗೆ ಎಷ್ಟು ಹಣ ಖರ್ಚು ಮಾಡಿದ್ದೀರಿ ಮತ್ತು ಲಸಿಕೆ ಉತ್ಪಾದಿಸುವ ಸಂಸ್ಥೆಗಳಿಗೆ ಎಷ್ಟು ಹಣ ನೀಡಿದ್ದೀರಿ ಎನ್ನುವುದನ್ನು ಬಹಿರಂಗಪಡಿಸಿ ಎಂದು ಸೂಚಿಸಿದೆ.

ಲಸಿಕಾ ಉತ್ಪಾದನಾ ಸಂಸ್ಥೆಗಳಿಗೆ ಮುಂಗಡವಾಗಿ ಲಸಿಕೆ ಉತ್ಪಾದನೆಗೆ ಪೂರ್ವಕವಾಗಿ ಎಷ್ಟು ಹಣ ನೀಡಿದ್ದೀರಿ ಎನ್ನುವ ವಿವರ ಬಹಿರಂಗಪಡಿಸಿ ಎಂದು ನ್ಯಾಯಪೀಠ ಕಟ್ಟುನಿಟ್ಟಿನ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದೆ.