ಶೇ. ೭೫ ರಷ್ಟು ಕ್ಷೇತ್ರಗಳ ಅಭ್ಯರ್ಥಿ ನಿರ್ಧಾರ: ಡಿಕೆಶಿ

ಬೆಂಗಳೂರು, ಮಾ. ೮- ಮುಂದಿನ ವಿಧಾನಸಭಾ ಚುನಾವಣೆಗೆ ಶೇ. ೭೫ ರಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ನಿರ್ಧಾರವಾಗಿದೆ. ಕಾಂಗ್ರೆಸ್ ಪಕ್ಷ ಬಹುಮತ ಪಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಚುನಾವಣಾ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಿನ್ನೆ ರಾಜ್ಯ ಚುನಾವಣಾ ಸಮಿತಿಯ ಸಭೆ ನಡೆದಿದೆ. ಶೇ. ೭೫ ರಷ್ಟು ಟಿಕೆಟ್ ಹಂಚಿಕೆಯ ತೀರ್ಮಾನಗಳು ಆಗಿವೆ. ಹೈಕಮಾಂಡ್ ಅನುಮೋದನೆ ಪಡೆದು ಅಭ್ಯರ್ಥಿಗಳ ಪಟ್ಟಿ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗುವುದು ನಿಶ್ಚಿತ. ಬಿಜೆಪಿ ಏನೇ ಮಾಡಿದರೂ ೬೫ ದಾಟಲ್ಲ. ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಇಳಿದ ಬಳಿಕ ಬಿಜೆಪಿಗೆ ೨೦೧೩ ರಲ್ಲಿ ೪೦ ಸ್ಥಾನ ಬಂದಿತ್ತು. ಈಗಲೂ ಅಷ್ಟೇ ಸ್ಥಾನ ಬಂದರೂ ಅಚ್ಚರಿಯಿಲ್ಲ ಎಂದರು.
ಬಿಜೆಪಿ ಸರ್ಕಾರದ ಬಗ್ಗೆ ಜನಸಾಮಾನ್ಯರಿಗೆ ಸಮಾಧಾನ ಇಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ನಾಳಿನ ೨ ಗಂಟೆ ಕರ್ನಾಟಕ ಬಂದ್ ಹಾಸ್ಯಾಸ್ಪದ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಅವರು ನನ್ನ ಬಗ್ಗೆ ವ್ಯಂಗ್ಯ ಮಾಡುತ್ತಲೇ ಇರಲಿ. ೨೦೦ ಯೂನಿಟ್ ಉಚಿತ ವಿದ್ಯುತ್ ಬಗ್ಗೆಯೂ ಟೀಕೆ ಮಾಡಿದ್ದಾರೆ. ನಾನು ವಿದ್ಯುತ್ ಸಚಿವನಾಗಿದ್ದವನು. ನನಗೆ ಗೊತ್ತಿದೆ, ಎಲ್ಲಿಂದ ಮಾಡಬೇಕು ಎಂಬುದು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳ್ಳಿನ ಸರದಾರ ಆಗುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹರಿಹಾಯ್ದರು.