ಶೇ. ೪೦ ಕಮೀಷನ್ ಅಸೆಂಬ್ಲಿಯಲ್ಲಿ ಪ್ರತಿಧ್ವನಿ

ಬೆಂಗಳೂರು, ಸೆ. ೨೧- ರಾಜ್ಯದಲ್ಲಿ ಕಾಮಗಾರಿಗಳ ಗುತ್ತಿಗೆ ಪಡೆಯಲು ಶೇ. ೪೦ ರಷ್ಟು ಕಮೀಷನ್ ನೀಡಬೇಕು ಎಂಬ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ನಿಯಮ-೬೯ ರಡಿಯಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಪ್ರಶ್ನೋತ್ತರ ಶೂನ್ಯ ವೇಳೆ ಕಲಾಪ ಮುಗಿಯುತ್ತಿದ್ದಂತೆ ಸಭಾಧ್ಯಕ್ಷರು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ನಿಲುವಳಿ ಸೂಚನೆಯಡಿ ಕಳುಹಿಸಿರುವ ಪ್ರಸ್ತಾಪ ನಿಲುವಳಿ ಸೂಚನೆಯಡಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಇದನ್ನು ತಿರಸ್ಕರಿಸಿದ್ದೇನೆ ಎಂದರು.
ಆಗ ಎದ್ದುನಿಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಈ ವಿಚಾರ ಬಹಳ ಗಂಭೀರವಾಗಿದೆ. ರಾಜ್ಯದ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಇತ್ತೀಚೆಗೆ ಪ್ರಧಾನಿಗಳಿಗೂ ಪತ್ರ ಬರೆದಿದ್ದಾರೆ. ಕಾಮಗಾರಿಗಳನ್ನು ಪಡೆಯಲು ಶೇ. ೪೦ ರಷ್ಟು ಕಮೀಷನ್ ನೀಡಬೇಕು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಹಾಗಾಗಿ ಇದನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಮಾಡಿಕೊಡಿ. ನಿಮ್ಮ ತೀರ್ಮಾನವನ್ನು ಪುನರ್ ಪರಿಶೀಲಿಸಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.ವಿರೋಧ ಪಕ್ಷದ ನಾಯಕರ ಮನವಿ ಸರಿಯಲ್ಲ, ಈ ಬಗ್ಗೆ ಅವರು ದಾಖಲೆಯನ್ನು ಒದಗಿಸಿಲ್ಲ. ಇದು ಇತ್ತೀಚೆಗೆ ನಡೆದ ಘಟನೆಯೂ ಆಗಿಲ್ಲ. ಹಾಗಾಗಿ ನಿಲುವಳಿ ಸೂಚನೆಯಡಿ ಇದಕ್ಕೆ ಅವಕಾಶ ಕೊಡಬೇಡಿ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.ಈ ಹಂತದಲ್ಲಿ ಎದ್ದುನಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ವಿಚಾರ ಅತ್ಯಂತ ಗಂಭೀರವಾಗಿದೆ. ಭ್ರಷ್ಟಾಚಾರ ಇವತ್ತು, ನಿನ್ನೆಯದಲ್ಲ, ಬೇರೆ ಬೇರೆ ರೂಪದಲ್ಲಿ ಭ್ರಷ್ಟಾಚಾರ ಇದೆ. ಕಮೀಷನ್ ಆರೋಪ ವಿಚಾರದಲ್ಲಿ ಸರ್ಕಾರ ಚರ್ಚೆಗೆ ಸಿದ್ದವಿದೆ. ಸಮಯ ನಿಗದಿ ಮಾಡಿ. ನಾವು ಚರ್ಚೆಗೆ ಸಿದ್ದರಿದ್ದೇವೆ. ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.
ಆಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿಯಮ-೬೯ ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ, ಇದೇ ಸಂಬಂಧ ಬಿಜೆಪಿಯ ರಾಜೀವ್ ಅವರೂ ಒಂದು ಪತ್ರ ನೀಡಿದ್ದಾರೆ. ಎರಡನ್ನೂ ಸೇರಿಸಿ ನಿಯಮ-೬೯ ರಡಿಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದರು.