ಶೇ.೧೦ ಮೀಸಲಾತಿ ಜಾರಿಗೆ ಒಪ್ಪಿಗೆ-ಸುಧಾಕರ್

ಕೋಲಾರ,ನ,೧೫- ಹಿಂದುಳಿದ ಮೇಲ್ವರ್ಗಕ್ಕೆ ಶೇ.೧೦ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದರಿಂದ ಇದರ ಸಮಗ್ರ ಜಾರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ್‍ನಳ್ಳಿ ನೇತೃತ್ವದಲ್ಲಿ ಸರ್ಕಾರದ ಮೇಲೆ ಒತ್ತಡ ತರಲಾಗಿದ್ದು, ಸಿಎಂ ಜತೆಗೆ ಮಾತನಾಡಿದ್ದು, ಸಮಿತಿ ರಚನೆಗೆ ಸರ್ಕಾರ ಒಪ್ಪಿದೆ ಎಂದು ರಾಜ್ಯ ಶುಕ್ಲ ಯಜುರ್ವೇದ ಮಹಾಮಂಡಳದ ಅಧ್ಯಕ್ಷ ಹಾಗೂ ಹೈಕೋರ್ಟ್ ಹಿರಿಯ ವಕೀಲ ಸುಧಾಕರಬಾಬು ತಿಳಿಸಿದರು.
ನಗರದ ಶಂಕಮಠದಲ್ಲಿಂದು ಕರೆದಿದ್ದ ಶುಕ್ಲ ಯಜುರ್ವೇದ ಬ್ರಾಹ್ಮಣ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ಸಮುದಾಯದಲ್ಲಿನ ಬಡವರಿಗೆ ಈ ಸೌಲಭ್ಯ ಸಿಗುವಂತಾಗಬೇಕು, ಈ ನಿಟ್ಟಿನಲ್ಲಿ ಎಕೆಬಿಎಂಎಸ್ ಅಧ್ಯಕ್ಷ ಅಶೋಕ್ ಹಾರ್‍ನಳ್ಳಿ, ಉಪಾಧ್ಯಕ್ಷ ರಾಜೇಂದ್ರಬಾಬು ನೇತೃತ್ವದಲ್ಲಿ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಮಹಾಸಭಾದಿಂದ ಗುಂಪು ವಿಮೆ ಒದಗಿಸುವ ಕುರಿತು ಕ್ರಮವಹಿಸಲು ಮನವಿ ಮಾಡಿದ ಅವರು, ಇದೀಗ ಜಾರಿಯಾಗಿರುವ ‘ದೇವುಡು’ ಪತ್ತಿನ ಸಹಕಾರ ಸಂಘದ ಸದಸ್ಯರಾಗುವ ಮೂಲಕ ಯಶಸ್ವಿನಿ ಆರೋಗ್ಯ ವಿಮೆ ಪಡೆದುಕೊಳ್ಳಲು ಸಮುದಾಯದ ಜನತೆ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಯಶಸ್ವಿನಿ ಯೋಜನೆಗೆ ಬಾರದವರು ರಾಜ್ಯ ಸರ್ಕಾರದ ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳಲು ಪಿಎಸ್.ಸತ್ಯನಾರಾಯಣರಾವ್ ಅವರನ್ನು ಸಂಪರ್ಕಿಸಲು ಕೋರಿದರು.
ಮೇಲ್ವರ್ಗದ ಹಿಂದುಳಿದವರ ಪಟ್ಟಿಯಲ್ಲಿ ಮೀಸಲಾತಿ ಪಡೆದುಕೊಳ್ಳಲು ೫ ಎಕರೆ ಜಮೀನು, ೮ ಲಕ್ಷ ಆದಾಯ ಮಿತಿ ಇದ್ದು, ಪ್ರಮಾಣ ಪತ್ರ ಪಡೆದುಕೊಳ್ಳಲು ಶುಕ್ಲ ಯಜುರ್ವೇದ ಮಹಾಮಂಡಳದ ವಕ್ತಾರರಾದ ಅಮರನಾಥ್, ವೆಂಕಟೇಶ್ ಅವರ ಸಹಕಾರ ಪಡೆಯಲು ಸಮುದಾಯಕ್ಕೆ ಕರೆ ನೀಡಿದರು.
ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶುಕ್ಲ ಯಜುರ್ವೇದ ಸಮುದಾಯ ಹೆಚ್ಚಿದ್ದು, ೧೦೧ ರೂ ಪಾವತಿಸುವ ಮೂಲಕ ಸದಸ್ಯತ್ವ ಪಡೆದುಕೊಳ್ಳುವಂತೆ ಕೋರಿದ ಸುಧಾಕರ ಬಾಬು,ಸದಸ್ಯತ್ವ ಮಾಡಿಸಿಕೊಳ್ಳಲು ಸಮುದಾಯದ ಮುಖಂಡರಾದ ವೆಂಕಟೇಶ್, ಶ್ರೀನಾಥ್, ಉಸ್ತುವಾರಿ ರಾಮಣ್ಣ, ಲೆಕ್ಕಪರಿಶೋಧಕ ಶೇಖರ್ ಅವರನ್ನು ಸಂಪರ್ಕಿಸಲು ಕೋರಿದರು.
ಸಭೆಯಲ್ಲಿ ಸಮುದಾಯದ ಮುಖಂಡರಾದ ಅಮರನಾಥ್, ಬೆಮೆಲ್ ರಾಮಣ್ಣ, ಅನಂತಮೂರ್ತಿ, ಡಿ.ಎಂ.ಶೇಖರ್, ಸತ್ಯನಾರಾಯಣರಾವ್, ವೆಂಕಟೇಶ್, ಶ್ರೀನಾಥ್, ಬೆಂಗಳೂರು ಪ್ರಕಾಶ್, ಮಂಡಿಕಲ್ ವೆಂಕಟೇಶ್ ಮತ್ತಿತರರಿದ್ದರು.