ಶೇರಾಪುರ ವಸತಿ ಯೋಜನೆ ಪ್ರಗತಿ-ಇನ್ನಾರು ತಿಂಗಳಲ್ಲಿ ಲೋಕಾರ್ಪಣೆ: ವಿ.ಸೋಮಣ್ಣ

ದಾವಣಗೆರೆ,ಮೇ 30;ಜಿಲ್ಲೆಯ ಹರಿಹರ ತಾಲ್ಲೂಕಿನ ಶೇರಾಪುರದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ 49.11 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ದಿಪಡಿಸಲಾಗುತ್ತಿರುವ ವಸತಿ ಯೋಜನೆ ಕಾಮಗಾರಿ ಇನ್ನು 6 ತಿಂಗಳಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ವಸತಿ ಸಚಿವರಾದ ವಿ.ಸೋಮಣ್ಣ ತಿಳಿಸಿದರು.  ಹರಿಹರ ತಾಲ್ಲೂಕಿನ ಶೇರಾಪುರ ಪ್ರದೇಶದಲ್ಲಿ ನಡೆಯುತ್ತಿರುವ ನಿವೇಶನ ಕಾಮಗಾರಿಯನ್ನು ಸಂಸದರು, ಶಾಸಕರೊಂದಿಗೆ ಪರಿಶೀಲಿಸಿದ ನಂತರ ಮಾತನಾಡಿದ ಅವರು ಶೇರಾಪುರದಲ್ಲಿ ಅಭಿವೃದ್ದಿಪಡಿಸಲಾಗುತ್ತಿರುವ ಲೇಔಟ್ ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಸಂಸದರು, ಶಾಸಕರ ಸಮ್ಮುಖದಲ್ಲಿ ಉದ್ಘಾಟಿಸಲಾಗುವುದು ಎಂದರು. ಕರ್ನಾಟಕ ಗೃಹ ಮಂಡಳಿ ವತಿಯಿಂದ ಹರಿಹರ ತಾಲ್ಲೂಕಿನ ಶೇರಾಪುರದಲ್ಲಿ ಸುಮಾರು 49 ಎಕರೆ 11 ಗುಂಟೆ ವಿಸ್ತೀರ್ಣದಲ್ಲಿ ನಿವೇಶನ ಮತ್ತು ವಸತಿ ಸಮುಚ್ಚಯ ನಿರ್ಮಿಸಲು ಲೇಔಟ್ ಅಭಿವೃದ್ದಿಪಡಿಸಲಾಗುತ್ತಿದೆ. ಮೈಸೂರಿನ ಮೆ|| ಕೆ.ವಿ.ಸಿ.ಹೆಚ್.ಎಸ್.ಆರ್ ಎಂಬ ಗುತ್ತಿಗೆದಾರರು ಸುಮಾರು ರೂ.25.05 ಕೋಟಿ ಮೊತ್ತದಲ್ಲಿ 2021 ರ ಜನವರಿ 18 ರಿಂದ ಈ ನಿವೇಶನಗಳನ್ನು ಅಭಿವೃದ್ದಿಪಡಿಸುವ ಕಾಮಗಾರಿಯನ್ನು ಕೈಗೊಂಡಿದ್ದಾರೆ. ಡಿಸೆಂಬರ್ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಪ್ರದೇಶದಲ್ಲಿ 20*30, 30*40, 60*40 ವಿಸ್ತೀರ್ಣದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವವರು, ಸ್ಥಳೀಯರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ 20*30 ರ ನಿವೇಶನಗಳನ್ನು ಅರ್ಧ ದರಕ್ಕೆ ಹಂಚಿಕೆ ಮಾಡಲಾಗುವುದು. ಸೇವಾ ಉದ್ದೇಶದಿಂದ ನಿವೇಶನ ಅಭಿವೃದ್ದಿಸಲಾಗುತ್ತಿದ್ದು 24*7 ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗುವುದು. ಇದೊಂದು ಪ್ರತಿಷ್ಟಿತ ಬಡಾವಣೆಯಾಗಲಿದ್ದು ಒಟ್ಟು 650 ನಿವೇಶನಗಳನ್ನು ಮಾಡಲಾಗುವುದು. ಆದರೆ ಈಗಾಗಲೇ 33 ಸಾವಿರ ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದರು. ಕಾನೂನು ಚೌಕಟ್ಟಿನಲ್ಲೇ ನಿಯಮಾನುಸಾರ ಲೇಔಟ್ ಅಭಿವೃದ್ದಿಪಡಿಸಲಾಗುತ್ತಿದೆ. ಆದರೆ ಅಕ್ಕಪಕ್ಕದ ಕೆಲ ರೈತರು ತಮ್ಮ ತೋಟ ಮತ್ತು ಹೊಲಗಳಿಗೆ ಲೇಔಟ್ ಎತ್ತರವಾಗುವ ಕಾರಣ ತಮ್ಮ ಜಮೀನಿನಲ್ಲಿ ಮಳೆ ನೀರು ನಿಂತು ಶೀತಬಾಧೆ ಕಾಡಲಿದೆ. ಆದ ಕಾರಣ ಕಾಲುವೆ ನಿರ್ಮಿಸಿ ನೀರು ಹೋಗುವಂತೆ ವ್ಯವಸ್ಥೆ ಮಾಡಿಕೊಡಲು ಮನವಿ ಮಾಡಿದ್ದಾರೆ. ಆ ಪ್ರಕಾರವೇ ಅಕ್ಕಪಕ್ಕದ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ ಎಂದರು. ಹಾಗೂ ಲೇಔಟ್ ವ್ಯಾಪ್ತಿಯಲ್ಲಿ ರಸ್ತೆ, ಪಾರ್ಕುಗಳು, ಅಂಗನವಾಡಿ ಕೇಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಶಾಲೆಯನ್ನೂ ತೆರೆÀಯಲು ಕ್ರಮ ವಹಿಸಲು ಸೂಚಿಸಿದ್ದೇನೆ ಎಂದ ಅವರು ಕರ್ನಾಟಕ ಗೃಹ ಮಂಡಳಿ, ರಾಜೀವ್ ಗಾಂಧಿ ಆವಾಸ್ ಯೋಜನೆ, ಕೊಳಚೆ ಅಭವೃದ್ದಿ ಮಂಡಳಿಯಡಿ ವಸತಿ ಯೋಜನೆಗಳಿಗೆ ಚಾಲನೆ ಸಿಕ್ಕಿದ್ದು ಕೆಲಸಗಳು ಆಗುತ್ತಿವೆ ಎಂದರು.ನಿರ್ಬಂಧದ ಬಗ್ಗೆ ಜೂ.7 ರ ನಂತರ ನಿರ್ಧಾರ: ಜೂನ್ 7 ರವರೆಗೆ ಈಗ ಇರುವ ನಿರ್ಬಂಧಗಳು ಚಾಲ್ತಿಯಲ್ಲಿರುತ್ತವೆ. ಪ್ರಸ್ತುತ ಶೇ.10 ರಷ್ಟು ಕೋವಿಡ್ ಪ್ರಕರಣ ಕಡಿಮೆ ಆಗಿದೆ. ಇನ್ನೂ ಕಡಿಮೆ ಆಗಬೇಕು. ಮಾನ್ಯ ಮುಖ್ಯಮಂತ್ರಿಯವರು ಜೂನ್ 7 ರ ನಂತರ ನಿರ್ಬಂಧಗಳನ್ನು ಮುಂದುವರೆಸಬೇಕಾ ಅಥವಾ ಬೇಡವಾ ಎಂಬ ಬಗ್ಗೆ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳುವರು. ಎಲ್ಲರೂ ಈ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಶ್ರಮಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ವಾರ ಕಾಲ ಮನೆಯಲ್ಲಿಯೇ ಇರಿ. ಪ್ರಕರಣ ಇಳಿಮುಖವಾದರೆ ನಿರ್ಬಂಧ ಸಡಿಲಿಕೆ ಆಗಬಹುದು. ಆದ ಕಾರಣ ಜನರು ಸಮಸ್ಯೆ ಅರಿತು ಸಹಕರಿಸಬೇಕೆಂದು ಮನವಿ ಮಾಡಿದರು. ಈ ವೇಳೆ ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಕ್ಷೇತ್ರದ ಶಾಸಕರಾದ ರಾಮಪ್ಪ, ಮಾಜಿ ಶಾಸಕ ಬಿ.ಪಿ.ಹರೀಶ್, ಕರ್ನಾಟಕ ಗೃಹ ಮಂಡಳಿಯ ಮುಖ್ಯ ಅಭಿಯಂತರ ನಂಜುಂಡಸ್ವಾಮಿ ಟಿ.ಡಿ, ಕಾರ್ಯಪಾಲಕ ಅಭಿಯಂತರ ರವೀಂದ್ರ ಎಸ್.ಎನ್, ಜ್ಯೂನಿಯರ್ ಇಂಜಿನಿಯರ್ ಪ್ರಿಯಾ.ಕೆ.ಎ, ಇತರೆ ಅಧಿಕಾರಿಗಳು ಹಾಜರಿದ್ದರು.