ಶೇಂಗಾ ಬೀಜಕ್ಕಾಗಿ ಅನ್ನದಾತರ ಪರದಾಟ

ದೇವದುರ್ಗ: ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಕಡಲೆ ಶೇಂಗಾ ಬಿತ್ತನೆ ಕಾರ್ಯ ತಾಲೂಕಿನಲ್ಲಿ ಚುರುಕುಗೊಂಡಿದ್ದು, ಬಿತ್ತನೆ ಬೀಜಕ್ಕಾಗಿ ರೈತರು ಪರದಾಡುತ್ತಿದ್ದಾರೆ.
ತಾಲೂಕಿನಲ್ಲಿ ಕೃಷಿ ಇಲಾಖೆ ಸುಮಾರು ೩೦೦ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಿದೆ. ಆದರೆ, ಅತಿಯಾದ ಮಳೆ ಮತ್ತು ನೆರೆಯಿಂದ ರೈತರು ಬಿತ್ತನೆ ಮಾಡಿದ್ದ ಹತ್ತಿ, ಮೆಣಸಿನಕಾಯಿ ಬೆಳೆಗಳು ಸಂಪೂರ್ಣ ಕೊಳೆತು ತೀವ್ರ ನಷ್ಟ ಅನುಭವಿಸಿದ್ದರು. ಈ ನಷ್ಟ ಸರಿದೂಗಿಸಲು ಕೊಳೆತ ಮೆಣಸಿನಕಾಯಿ ಹಾಗೂ ಹತ್ತಿ ಕಳೆ ಕಿತ್ತು, ಶೇಂಗಾ ಬಿತ್ತನೆ ಮುಂದಾಗಿದ್ದಾರೆ.
ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರ ಹೊರತು ಪಡಿಸಿ ಎಲ್ಲಿಯೂ ಖಾಸಗಿಯಾಗಿ ಶೇಂಗಾ ಬಿತ್ತನೆ ಬೀಜ ಸಿಗುವುದಿಲ್ಲ. ಪ್ರತಿವರ್ಷ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ರೈತರಿಗೆ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ದೇವದುರ್ಗ, ಜಾಲಹಳ್ಳಿ, ಗಬ್ಬೂರು ಹಾಗೂ ಅರಕೇರಾ ರೈತ ಸಂಪರ್ಕ ಕೇಂದ್ರಕ್ಕೆ ಶೇಂಗಾ ಬಿತ್ತನೆ ಬೀಜ ಪೂರೈಕೆ ಮಾಡಿ ರೈತರಿಂದ ಪಹಣಿ ಪಡೆದು ವಿತರಿಸಲಾಗುತ್ತಿದೆ.
ಕೃಷಿ ಇಲಾಖೆ ಗುರಿಯಂತೆ ಈ ವರ್ಷ ನಾಲ್ಕು ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ. ಆದರೆ, ಹತ್ತಿ ಹಾಗೂ ಮೆಣಸಿನಕಾಯಿ ಬೆಳೆದ ರೈತರು ಬೆಳೆ ನಷ್ಟದಿಂದ ಶೇಂಗಾ ಬಿತ್ತನೆಗೆ ಮೊರೆ ಹೋಗಿದ್ದರಿಂದ ಶೇಂಗಾ ಬಿತ್ತನೆ ಬೀಜದ ಕೊರತೆ ಉಂಟಾಗಿದೆ. ಸಬ್ಸಿಡಿ ದರದಲ್ಲಿ ಶೇಂಗಾ ಖರೀದಿಗಾಗಿ ನೂರಾರು ರೈತರು ರೈತ ಸಂಪರ್ಕ ಕೇಂದ್ರದ ಮುಂದೆ ಹಗಲು-ರಾತ್ರಿ ಸುದ್ದನೆಯ ಲೈನ್‌ನಲ್ಲಿ ನಿಲ್ಲುತ್ತಿದ್ದಾರೆ.
ಖಾಸಗಿ ಅಂಗಡಿಗಳಲ್ಲೂ ಶೇಂಗಾ ಬಿತ್ತನೆ ಬೀಜ ದೊರೆಯುತ್ತಿಲ್ಲ. ಬೇರೆ ತಾಲೂಕಿನಲ್ಲಿ ಬಿತ್ತನೆ ಬೀಜ ಖರೀದಿಸಿ ತರಲು ರೈತರಿಗೆ ಸಮಸ್ಯೆಯಗುತ್ತಿದೆ. ಸ್ಥಳೀಯವಾಗಿ ಬಿತ್ತನೆ ಬೀಜ ದೊರೆತರೂ ದುಪ್ಪಟ್ಟು ಬೆಲೆ ನೀಡಬೇಕಾಗಿದೆ. ಇದರಿಂದ ರೈತರು ಬೀಜ ಸಿಗದೆ ತಲೆಮೇಲೆ ಕೈಹೊತ್ತು ಕೂಡುವಂತಾಗಿದೆ.
ಕೃಷಿ ಇಲಾಖೆಗೆ ಬೀಜ ವಿತರಣೆ ಮಾಡುವಂತೆ ರೈತರು ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬೀಜ ಇಲಾಖೆಯಿಂದ ತರಿಸುತ್ತೇವೆ ಎಂದು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಶೇಂಗಾ ಬಿತ್ತನೆ ಅವಧಿ ಮುಗಿಯಲಿದ್ದು, ರೈತರು ಹೊಲಗಳನ್ನು ಬೀಳು ಬಿಡಬೇಕಾಗುತ್ತದೆ ಎಂದು ಕೃಷಿಕರು ಆರೋಪಿಸಿದ್ದಾರೆ. ಕೂಡಲೇ ಬೇರೆ ತಾಲೂಕು ಇಲ್ಲವೇ ಖಾಸಗಿಯಾಗಿ ಬೀಜ ಖರೀದಿ ಮಾಡಿ ರೈತರಿಗೆ ವಿತರಿಸಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.

ಕೋಟ್=======
ಪ್ರತಿವರ್ಷ ೨೫೦೦ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರದ ಮೂಲಕ ರೈತರಿಗೆ ವಿತರಿಸಲಾಗುತ್ತಿತ್ತು. ಈ ವರ್ಷ ನಾಲ್ಕು ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ. ಅತಿಯಾದ ಮಳೆಯಿಂದ ಹತ್ತಿ, ಮೆಣಸಿನಕಾಯಿ ಬೆಳೆ ಹಾಳಾಗಿದ್ದು, ಅದನ್ನು ಕಿತ್ತು ರೈತರು ಶೇಂಗಾ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಇದರಿಂದ ಶೇಂಗಾ ಬಿತ್ತನೆ ಬೀಜದ ಕೊರತೆ ಉಂಟಾಗಿದೆ. ರೈತರ ಬೇಡಿಕೆ ಅನುಗುಣವಾಗಿ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡಲುವಂತೆ ಜಂಟಿ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.
ಡಾ.ಎಸ್.ಪ್ರಿಯಾಂಕಾ
ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ

ಕೋಟ್======
ಕೃಷಿ ಇಲಾಖೆ ತಾಲೂಕಿನಲ್ಲಿ ನಿಷ್ಕ್ರೀಯವಾಗಿ. ರೈತರಿಗೆ ಅಗತ್ಯಕ್ಕೆ ಅನುಗುಣವಾಗಿ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡುವಲ್ಲಿ ವಿಫಲವಾಗಿದೆ. ಅತಿಯಾದ ಮಳೆಯಿಂದ ರೈತರು ಮೆಣಸಿನಕಾಯಿ, ಹತ್ತಿ ಬೆಳೆ ಕೊಳೆದುಕೊಂಡಿದ್ದಾರೆ. ಆ ನಷ್ಟ ಸರಿದೂಗಿಸಲು ಶೇಂಗಾ ಬಿತ್ತನೆ ಮುಂದಾಗಿದ್ದಾರೆ. ರೈತ ಸಂಪರ್ಕ ಕೇಂದ್ರದ ಮುಂದೆ ಹಗಲು ರಾತ್ರಿ ಲೈನ್ ನಿಂತರೂ ಬೀಜ ಸಿಗುತ್ತಿಲ್ಲ. ರೈತರು ಏನು ಮಾಡಬೇಕು. ಕೂಡಲೇ ಅಧಿಕಾರಿಗಳು ಬಿತ್ತನೆ ಬೀಜ ತರಿಸಿಕೊಂಡು ವಿತರಣೆ ಮಾಡಬೇಕು.
ಬೂದಯ್ಯಸ್ವಾಮಿ, ಉಮಾಪತಿಗೌಡ
ರೈತ ಸಂಘದ ಮುಖಂಡರು