ಶೆಹ್ರಿ-ದೌಸಾರಿ ಪ್ರಚಂಡ ಪ್ರದರ್ಶನ: ಮೆಸ್ಸಿ ಬಳಗಕ್ಕೆ ಸೌದಿ ಸಿಡಿಲಾಘಾತ!

ದೋಹಾ (ಕತಾರ್‌), ನ.೨೨- ಪ್ರತೀ ವಿಶ್ವಕಪ್‌ ಫುಟ್ಬಾಲ್‌ನಲ್ಲೂ ಅಚ್ಚರಿಯ ಫಲಿತಾಂಶ ಕಾಣುವುದು ಸಾಮಾನ್ಯವಾಗಿಬಿಟ್ಟಿದೆ. ಇದೀಗ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಹಾಗೂ ಜಗತ್ತಿನ ಖ್ಯಾತನಾಮ ಫುಟ್ಬಾಲ್‌ ಆಟಗಾರರಲ್ಲಿ ಒಬ್ಬರಾಗಿರುವ ಲಿಯೋನೆಲ್‌ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ದುರ್ಬಲ ಸೌದಿ ಅರೇಬಿಯಾ ವಿರುದ್ಧ ೧-೨ರ ಅಂತರದಲ್ಲಿ ಸೋಲುಣ್ಣುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದೆ. ಸದ್ಯ ಅರ್ಜೆಂಟೀನಾ ವಿರುದ್ಧದ ಸೌದಿಯ ಜಯವನ್ನು ಫುಟ್ಬಾಲ್‌ ವಿಶ್ವಕಪ್‌ ಇತಿಹಾಸದ ಅತ್ಯಂತ ಅಚ್ಚರಿಯ ಫಲಿತಾಂಶದ ಪಂದ್ಯ ಕರೆದರೆ ತಪ್ಪಾಗಲಾರದು.


ಇಲ್ಲಿನ ಲುಸ್ಸೈಲ್‌ ಸ್ಟೇಡಿಯಂನಲ್ಲಿ ನಡೆದ ʻಸಿʼ ಗುಂಪಿನ ಮೊದಲ ಪಂದ್ಯದಲ್ಲಿ ಸಹಜವಾಗಿಯೇ ಅರ್ಜೆಂಟೀನಾ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಅಲ್ಲದೆ ಮೆಸ್ಸಿ, ಡಿ ಮರಿಯಾ, ಮಾರ್ಟಿನೆಝ್‌ರಂಥ ಘಟಾನುಘಟಿ ಆಟಗಾರರ ದಂಡೇ ಇರುವ ವಿಶ್ವದ ಮೂರನೇ ಶ್ರೇಯಾಂಕದ ಅರ್ಜೆಂಟೀನಾ ತಂಡ ಉತ್ತಮ ಅಂತರದ ಗೆಲುವು ಸಾಧಿಸುವ ವಿಶ್ವಾಸ ಕೂಡ ಹೊಂದಿತ್ತು. ಆದರೆ ಪಂದ್ಯದಲ್ಲಿ ನಡೆದಿದ್ದೇ ಬೇರೆ ರೀತಿಯಾಗಿತ್ತು. ಪಂದ್ಯದ ೧೦ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಮೆಸ್ಸಿ ಅರ್ಜೆಂಟೀನಾಗೆ ಮೊದಲ ಮುನ್ನಡೆ ತಂದುಕೊಟ್ಟರೆ ನಂತರ ಸೌದಿ ಅರೇಬಿಯಾವೇ ಪಂದ್ಯದಲ್ಲಿ ಮೇಲುಗೈ ಸಾಧಿಸಿತು. ಪ್ರಥಮಾರ್ಧದಲ್ಲಿ ಅರ್ಜೆಂಟೀನಾ ೧-೦ ಅಂತರದಲ್ಲಿ ಮುನ್ನಡೆ ಸಾಧಿಸಿದರೆ ದ್ವಿತೀಯಾರ್ಧದಲ್ಲಿ ಸೌದಿ ಅಬ್ಬರ ಮೇಲೈಸಿತು. ೪೮ನೇ ನಿಮಿಷದಲ್ಲಿ ಅಲ್‌ ಶೆಹ್ರಿ ಗಳಿಸಿದ ಆಕರ್ಷಕ ಗೋಲಿನ ನೆರವಿನಿಂದ ಸೌದಿ ಪಂದ್ಯದಲ್ಲಿ ೧-೧ರ ಸಮಬಲ ಸಾಧಿಸಿತು. ಅಲ್ಲದೆ ಕೆಲವೇ ನಿಮಿಷಗಳಲ್ಲಿ (೫೩) ಸೌದಿಯ ಮಿಡ್‌ಫೀಲ್ಡರ್‌ ಅಲ್‌ ದೌಸಾರಿ ಈ ಮುನ್ನಡೆಯನ್ನು ೨-೦ಗೆ ಏರಿಸುವ ಮೂಲಕ ಸಹಜವಾಗಿಯೇ ಅರ್ಜೆಂಟೀನಾಗೆ ಆಘಾತ ನೀಡಿದರು. ನಂತರದ ಅವಧಿಯಲ್ಲಿ ಸಮಬಲ ಸಾಧಿಸುವ ಅರ್ಜೆಂಟೀನಾ ಮಿಡ್‌ಫೀಲ್ಡರ್‌ಗಳು ಹಾಗೂ ಸ್ಟ್ರೈಕರ್‌ಗಳ ಎಲ್ಲಾ ಯತ್ನವನ್ನು ಸೌದಿಯ ಡಿಫೆಂಡರ್‌ಗಳು ವಿಫಲಗೊಳಿಸಿದರು. ಅಲ್ಲದೆ ಗೋಲು ಗಳಿಸುವ ಹಲವು ಅವಕಾಶಗಳನ್ನು ಅರ್ಜೆಂಟೀನಾ ಪಡೆದರೂ, ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಸೌದಿಯ ಡಿಫೆಂಡಿಂಗ್‌ ರಕ್ಷಣಾ ಕೋಟೆಯನ್ನು ಭೇದಿಸಿ ಒಳನುಗ್ಗಲು ಮೆಸ್ಸಿಗೆ ಕೂಡ ಸಾಧ್ಯವಾಗದಿದ್ದದ್ದು ಅಚ್ಚರಿಯೇ ಸರಿ. ಅಂತಿಮವಾಗಿ ಪಂದ್ಯದಲ್ಲಿ ನಿಗದಿತ ನಿಮಿಷಗಳ ಆಟ ಅಂತ್ಯಗೊಂಡಾಗ ಸೌದಿ ೨-೧ರ ಅಂತರದ ಅಚ್ಚರಿಯ ಗೆಲುವು ಸಾಧಿಸಿ, ಅಮೂಲ್ಯ ಮೂರು ಅಂಕ ಸಂಪಾದಿಸಿಕೊಂಡಿತು. ಅತ್ತ ಗೆಲುವಿನ ಮೂಲಕ ಸೌದಿ ʻಸಿʼ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದರೆ ಅರ್ಜೆಂಟೀನಾ ಅಂತಿಮ ಸ್ಥಾನದಲ್ಲಿದೆ. ಒಟ್ಟಿನಲ್ಲಿ ಈ ಪಂದ್ಯ ಅರ್ಜೆಂಟೀನಾ ಅಭಿಮಾನಿಗಳಿಗೆ ಸಿಡಿಲು ಬಡಿದ ಅನುಭವ ನೀಡಿದಂತೂ ಸತ್ಯ.