ಶೆಡ್‌ಗಳನ್ನು ಧ್ವಂಸಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ – ಹನುಮಂತು

ರಾಯಚೂರು, ನ. ೨೩- ನಗರದ ವಾರ್ಡ್ ನಂ. ೨೭ ರಲ್ಲಿ ಗುಡಿಸಲು ಹಾಗೂ ಟಿನ್ ಶೆಡ್‌ಗಳನ್ನು ಏಕಾಏಕಿ ಧ್ವಂಸಗೊಳಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ಭೋವಿ (ವಡ್ಡರ್) ಸಂಘದ ಜಿಲ್ಲಾಧ್ಯಕ್ಷ ಹನುಮಂತು ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ನಗರದ ವಾರ್ಡ್ ನಂ. ೨೭ರಲ್ಲಿರುವ ಜಲಾಲ್‌ನಗರದಲ್ಲಿ ಅಂದಾಜು ೧೮-೨೦ ವರ್ಷಗಳಿಂದ ಹಲವು ಕುಟುಂಬಗಳು ವಾಸಕ್ಕಾಗಿ ಹಾಕಿಕೊಂಡಿರುವ ಗುಡಿಸಲು ಅಥವಾ ಟಿನ್‌ಶೆಡ್‌ಗಳನ್ನು ತಡರಾತ್ರಿ ೨.೩೦ ರ ಸಮಯಕ್ಕೆ ಜಿಲ್ಲಾ ಆಡಳಿತದಿಂದ ಬಂದು ಧ್ವಂಸ ಮಾಡಿದ್ದರಿಂದ ಅಲ್ಲಿನ ನಿವಾಸಿಗಳು ದಿಕ್ಕುಗಾಣದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವಲತ್ತುಕೊಂಡರು.
ಈ ಪ್ರದೇಶದಲ್ಲಿ ವಾಸಿಸುವವರು ಶ್ರಮಜೀವಿಗಳು, ಕಡು ಬಡವರು, ದಲಿತರು, ಹಾಗೂ ಹಿಂದುಳಿದವರೇ ಆಗಿದ್ದು, ಈಗಾಗಲೇ ೯೪(ಸಿ) ಯೋಜನೆಯಲ್ಲಿ ಅಕ್ರಮ ಸಕ್ರಮ ಅರ್ಜಿಯನ್ನು ಸಲ್ಲಿಸಲಾಗಿದೆ. ಇದಲ್ಲದೆ ಸಫಾಯಿ ಕರ್ಮಚಾರಿಗಳ ಜಾಗೆಯೆಂದು ಹೇಳಲಾಗುತ್ತಿರುವ ಪ್ರದೇಶ ಸನಿಹದಲ್ಲಿದ್ದು ಅಧಿಕಾರಿಗಳು ನಮ್ಮನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದರು.
ಈಗ ಧ್ವಂಸ ಮಾಡಿರುವ ಜಾಗದಲ್ಲಿಯೇ ಟಿನ್ ಶೆಡ್‌ಗಳನ್ನು ಹಾಕಿಕೊಡಬೇಕು. ಈ ಪ್ರದೇಶದ ಬಡವರ ನೆಲೆಗಳನ್ನು ಕಳೆದುಕೊಳ್ಳುವಂತೆ ಮಾಡಿದ ಅಧಿಕಾರಿಗಳನ್ನು ವಜಾಗೊಳಿಸಿ ಕಾನೂನುಕ್ರಮ ಜರುಗಿಸಬೇಕು. ನ.೨೭ ರೊಳಗೆ ಅದೇ ಜಾಗದಲ್ಲಿ ಗುಡಿಸಲು ಟೀನ್‌ಶೆಡ್ ಹಾಕಿಕೊಳ್ಳಲು ಅನುಮತಿ ಕೊಡದಿದ್ದರೆ ಅನಿವಾರ್ಯವಾಗಿ ಎಲ್ಲಜನಾಂಗದವರು ಸೇರಿಕೊಂಡು ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಾಗರಾಜ್, ಸಿ.ಬಿ.ವೀರೇಶ, ಮಟಮಾರಿ ಈರಣ್ಣ ಇದ್ದರು.