ಶೆಟ್ಟರ್ ಸೇರ್ಪಡೆ ಕಾಂಗ್ರೆಸ್‌ಗೆ ಬಲ

ಬೆಂಗಳೂರು, ಏ. ೧೭- ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಿದ್ದು, ಚುನಾವಣೆಯಲ್ಲಿ ೧೫೦ ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಭವಿಷ್ಯ ನುಡಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಗದೀಶ್‌ಶೆಟ್ಟರ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಶೆಟ್ಟರ್ ಅವರು ರಾಜ್ಯ ಕಂಡ ಸಜ್ಜನ ರಾಜಕಾರಣಿ. ಅವರು ಆರ್‌ಎಸ್‌ಎಸ್‌ನಿಂದ ಬಂದಿದ್ದರೂ ಜಾತ್ಯಾತೀತ ತತ್ವದ ಮೇಲೆ ಕೆಲಸ ಮಾಡಿದ್ದಾರೆ ಎಂದರು.
ಯಾವುದೇ ಕಾರಣವಿಲ್ಲದೆ, ಆರೋಪವಿಲ್ಲದೆ ಬಿಜೆಪಿಯವರು ಶೆಟ್ಟರ್ ಅವರಿಗೆ ಟಿಕೆಟ್ ವಂಚಿಸಿದ್ದಾರೆ. ಇದು ದುರುದ್ದೇಶ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ ಎಂದರು.
ರಾಜ್ಯದಲ್ಲಿ ಲಿಂಗಾಯತ ಸಮಾಜದ ದೊಡ್ಡ ಸಮಾಜ. ಸಾಮಾನ್ಯವಾಗಿ ಯಡಿಯೂರಪ್ಪ ಅವರನ್ನು ಸಮಾಜದ ದೊಡ್ಡ ನಾಯಕ ಎಂದು ಹೇಳಲಾಗಿದೆ. ಯಡಿಯೂರಪ್ಪ ನಂತರದ ಸ್ಥಾನದಲ್ಲಿ ಶೆಟ್ಟರ್ ಅವರನ್ನು ಆ ಸಮಾಜ ನೋಡುತ್ತಿತ್ತು. ಬಿಜೆಪಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ನಿರ್ದಾಕ್ಷಿಣ್ಯವಾಗಿ ತೆಗೆದು ಅಪಮಾನ ಮಾಡಿ ಕಣ್ಣೀರು ಹಾಕಿಸಿದರು. ಶೆಟ್ಟರ್ ಅವರು ಲಿಂಗಾಯತ ಸಮುದಾಯದ ದೊಡ್ಡ ನಾಯಕರಾದಿದ ಅವರನ್ನು ಕೆಟ್ಟದ್ದಾಗಿ ನಡೆಸಿಕೊಂಡಿದೆ. ಈ ರೀತಿ ಯಾವುದೇ ನಾಯಕರಿಗೆ ಆಗಬಾರದು ಎಂದರು.
ಜಗದೀಶ್ ಶೆಟ್ಟರ್ ಅವರು ಸ್ವಾಭಿಮಾನಿ ರಾಜಕಾರಣಿ. ಸ್ವಾಭಿಮಾನಕ್ಕೆ ಧಕ್ಕೆಯಾದ್ದರಿಂದ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ಈ ರೀತಿ ಬಿಜೆಪಿಯಲ್ಲಿ ಅನ್ಯಾಯವಾಗುತ್ತದೆ ಎಂದು ನಾನು ಭಾವಿಸರಿಲಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ಟಿಕೆಟ್ ತಪ್ಪಿಸಿರುವುದು ಘೋರ ಅಪರಾಧ ಎಂದರು
ಜಗದೀಶ್‌ಶೆಟ್ಟರ್ ಅವರು ಎಲ್ಲರ ಜತೆ ಚರ್ಚಿಸಿ ಅಳೆದ ತೂಗಿ ಇದನ್ನು ಸವಾಲು ಎಂದು ಸ್ವೀಕರಿಸಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಿದ್ಧರಾಮಯ್ಯ ಹೇಳಿದರು.