ಶೆಟ್ಟರ್ ವಿರುದ್ಧಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು, ಫೆ. ೧೭- ವಿಶ್ರಾಂತಿಗಾಗಿ ಬಿಳಿಗಿರಿ ರಂಗನಬೆಟ್ಟಕ್ಕೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರು ೨ ದಿನಗಳ ವಿಶ್ರಾಂತಿಗಾಗಿ ಕುಟುಂಬ ಸಮೇತ ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟದ ಕೆಗುಡಿಯ ಜಂಗಲ್ ಲಾಡ್ಜಸ್ ರೆಸಾರ್ಟ್‌ಗೆ ೨ ದಿನಗಳ ಹಿಂದೆ ತೆರಳಿದ್ದರು.
ಇಂದು ವಿಶ್ರಾಂತಿ ಮುಗಿಸಿ ರೆಸಾರ್ಟ್‌ನಿಂದ ಹೊರಡುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅವರು ವಿರುದ್ಧ ಪ್ರತಿಭಟಿಸಿದ್ದು ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಶೆಟ್ಟರ್ ಅವರು ಒಂದು ರೀತಿ ಮುಜುಗರಕ್ಕೆ ಸಿಲುಕಿದಂತಾಯಿತು. ಇಂದು ಬೆಳಿಗ್ಗೆ ಜಗದೀಶ್‌ಶೆಟ್ಟರ್ ಅವರು ಜಂಗಲ್ ಲಾಡ್ಸ್‌ನಿಂದ ತೆರಳುವ ಮಾಹಿತಿ ಅರಿತ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರುಗಳು ರೆಸಾರ್ಟ್ ಸಮೀಪ ಗುಂಪುಗೂಡಿ ಜಗದೀಶ್‌ಶೆಟ್ಟರ್ ವಿರುದ್ಧ ಧಿಕ್ಕೂರ ಕೂಗಿ ಆಕ್ರೋಶ ಹೊರ ಹಾಕಿದರು.
ನನ್ನ ತೆರಿಗೆ ನನ್ನ ಹಕ್ಕು ಅಭಿಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಸಚಿವರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜಗದೀಶ್‌ಶೆಟ್ಟರ್ ಕಾಂಗ್ರೆಸ್ ನಾಯಕರ ವಿರುದ್ಧ ಕೆಟ್ಟದ್ದಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಈ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಶೆಟ್ಟರ್ ರೆಸಾರ್ಟ್‌ನಿಂದ ನಿರ್ಗಮಿಸಿದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಶೆಟ್ಟರ್ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರಳಿದ್ದರು.