
ಹುಬ್ಬಳ್ಳಿ, ಏ16: ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಅವಕಾಶ ಕೊಡುವ ಕಾರಣಕ್ಕೆ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿದೆ, ಬದಲಾವಣೆ ತರುವ ಕಾಲ ಇದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಅವರ ರಾಜೀನಾಮೆ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಜಿಲ್ಲಾ, ರಾಜ್ಯ ಮಟ್ಟದ ಕೋರ್ ಕಮೀಟಿಯಲ್ಲಿ ಅವರ ಹೆಸರಿತ್ತು, ನಿನ್ನೆ ಅಮಿತ್ ಶಾ ಅವರು ಶೆಟ್ಟರ್ ಜೊತೆ ಮಾತನಾಡಿದ್ದಾರೆ, ಹೊಸ ಬೆಳವಣಿಗೆಗಾಗಿ ಈ ಪ್ರಯತ್ನ ಎಂದು ನುಡಿದರು.
ಇದು ಮೇಲಿನವರ ತೀರ್ಮಾನ ಎಂದ ಅವರು, ಜಗದೀಶ ಶೆಟ್ಟರ್ ಪಕ್ಷದಲ್ಲಿಯೇ ಮುಂದುವರೆಸಿಕೊಂಡು ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಮತ ವ್ಯಕ್ತಪಡಿಸಿದರು.
ಮೋದಿ ನೇತೃತ್ವದಲ್ಲಿ ಸ್ಥಾಪಿತ ರಾಜಕಾರಣದಲ್ಲಿ ಬದಲಾವಣೆ ತರುವ ಯತ್ನ ನಡೆದಿದ್ದು, ಯಡಿಯೂರಪ್ಪ ನಮಗೆ ಆದರ್ಶಪ್ರಾಯರು ಮುಖ್ಯಮಂತ್ರಿ ಇರುವಾಗಲೇ ರಾಜೀನಾಮೆ ಕೊಟ್ಟಿದ್ದಾರೆ ಎಂದ ಬೊಮ್ಮಾಯಿ, ಅದೇ ರೀತಿ ಈಶ್ವರಪ್ಪ ಚುನಾವಣೆ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ, ಶೆಟ್ಟರ್ ಅವರಿಗೆ ಇದಕ್ಕಿಂತ ದೊಡ್ಡ ಹುದ್ದೆಯನ್ನು ದಿಲ್ಲಿ ಮಟ್ಟದಲ್ಲಿ ಕೊಡುವುದಾಗಿ ಹಾಗೂ ಅವರು ಹೇಳಿದವರಿಗೆ ಟಿಕೆಟ್ ಕೊಡುವುದಾಗಿ ಹೇಳಲಾಗಿತ್ತು. ಆದರೆ ಶೆಟ್ಟರ್ ರಾಜೀನಾಮೆ ನೀಡಿರುವುದು ನೋವು, ಕಸಿವಿಸಿ ತಂದಿದೆ ಎಂದು ನುಡಿದರು.
ಲಿಂಗಾಯತ ಸಮುದಾಯಕ್ಕೆ ಅತಿ ಹೆಚ್ಚು ಸೀಟ್ ಕೊಟ್ಟಿದ್ದು ಬಿಜೆಪಿ ಎಂದು ಪ್ರತಿಪಾದಿಸಿದ ಅವರು, ಬಿಜೆಪಿ ಸಾಮಾಜಿಕ ಸಮೀಕರಣ ಮಾಡಿ ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದೊಯ್ಯುವ ಪ್ರಯತ್ನದಲ್ಲಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಮೊದಲನೇ ಪೀಳಿಗೆ ಬೆಳೆದು ನಿಂತರೆ, ಎರಡನೇ ಪೀಳಿಗೆಯಲ್ಲಿ ಲಿಂಗಾಯತ ಸಮುದಾಯದ ಸಿ.ಸಿ. ಪಾಟೀಲ, ಮುರಗೇಶ ನಿರಾಣಿ, ಸೋಮಣ್ಣ ಬಸನಗೌಡ ಪಾಟೀಲ ಯತ್ನಾಳ ಬೆಳೆದು ನಿಂತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಯಾರು ಅಂದರೆ ಎರಡು ಹೆಸರು ಬರುತ್ತದೆ, ಜೆಡಿಎಸ್‍ನಲ್ಲಿ ಕುಮಾರಸ್ವಾಮಿ ಹೆಸರು ಬರುತ್ತದೆ, ಈ ಭಾಗದ ಪ್ರಮುಖ ನಾಯಕರಾದ ಜಗದೀಶ ಶೆಟ್ಟರ್ ಪಕ್ಷದಲ್ಲೇ ಮುಂದುವರಿಸಿಕೊಂಡು ಹೋಗಿದ್ದರೆ ಉತ್ತಮವಾಗಿತ್ತು ಎಂದು ಸಿ.ಎಂ. ನುಡಿದರು.
ಪಕ್ಷ ತನ್ನ ಚಟುವಟಿಕೆಗಳನ್ನು ತನ್ನ ಸಂಘಟನೆಯನ್ನು, ರಣನೀತಿಯನ್ನು ಮುಂದುವರೆಸಿಕೊಂಡು ಹೋಗುತ್ತದೆ ಎಂದ ಅವರು, ಪಕ್ಷವನ್ನು ಗೆಲ್ಲಿಸುತ್ತೇವೆ ಇನ್ನೆರಡು ದಿನ ಈ ರೀತಿಯ ಬೆಳವಣಿಗೆಗಳು ನಡೆದು ಹೋದ ಮೇಲೆ ಪಕ್ಷ ಮತ್ತೆ ಪುಟಿದೆದ್ದು, ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದು ತಿಳಿಸಿದರು.
ಶೆಟ್ಟರ್ ನಿರ್ಗಮನದಿಂದ ಪಕ್ಷದ ಮೇಲಾಗುವ ಹಾನಿ ತಪ್ಪಿಸಲು ಯಾವ ಕ್ರಮ ಕೈಕೊಳ್ಳಲಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರಿಸುತ್ತ, ಈ `ಡ್ಯಾಮೇಜ್ ಕಂಟ್ರೋಲ್’ ಮಾಡುವ ಕುರಿತಂತೆ ಚರ್ಚೆ ನಡೆಯುತ್ತಿದೆ, ಪಕ್ಷ ಸಶಕ್ತವಾಗಿದೆ ಎಲ್ಲ ಸರಿಹೋಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.