ಶೆಟ್ಟರ್ ಬಿಜೆಪಿಗೆ ವಾಪಸಿಲ್ಲ

ಹುಬ್ಬಳ್ಳಿ, ಏ. ೨೬: ಸದ್ಯ ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ವಾಪಸಾಗುವ ಪ್ರಶ್ನೆಯೇ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಹಿಂದೆ ಕೆಜೆಪಿ ಕಟ್ಟಿದ್ದಿರಲ್ಲ? ಎಂಬ ಪ್ರಶ್ನೆಗೆ ಉತ್ತರಿಸುತ್ತ, ನಾನು ಕೆಜೆಪಿ ಕಟ್ಟಿದ್ದೆ. ಶೆಟ್ಟರ್ ತರಹ ಕಾಂಗ್ರೆಸ್ ಸೇರಿರಲಿಲ್ಲ. ನಾನು ಕೆಜೆಪಿ ಕಟ್ಟಿ ದೊಡ್ಡ ಅಪರಾಧ ಮಾಡಿದ್ದೆ. ಈ ಬಗ್ಗೆ ರಾಜ್ಯದ ಜನತೆಯ ಬಳಿ ಕ್ಷಮೆ ಸಹ ಕೇಳಿದ್ದೇನೆ ಎಂದು ನುಡಿದರು.
ಶೆಟ್ಟರ್ ಅವರಿಗೆ ಪಕ್ಷ ಎಲ್ಲ ಸ್ಥಾನಮಾನಗಳನ್ನು ನೀಡಿತ್ತು. ವಿಶ್ವಾಸದ್ರೋಹ ಮಾಡಿದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಶೆಟ್ಟರ್‌ರನ್ನು ಸೋಲಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಅವರು ಹೇಳಿದರು.