ಶೆಟ್ಟರ್ ಪಕ್ಷದ ಜೊತೆಗೇ ಇರಲಿದ್ದಾರೆ: ಮುನೇನಕೊಪ್ಪ

ಹುಬ್ಬಳ್ಳಿ,ಏ15: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಒಬ್ಬ ಸರಳ, ಸಜ್ಜನ ನಾಯಕರಾಗಿದ್ದಾರೆ. ಅವರು ಯಾವತ್ತೂ ಪಕ್ಷದ ಜೊತೆಗೆ ಇರಲಿದ್ದಾರೆ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಕಳೆದ 30 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ತಳಮಟ್ಟದಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಪಕ್ಕದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಕಾರ್ಯನಿರ್ವಹಣೆ ಮಾಡಿದ್ದಾರೆ. ಹೀಗಾಗಿ ಕೇಂದ್ರದ ವರಿಷ್ಠರು ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದರು.

ಜಗದೀಶ್ ಶೆಟ್ಟರ್ ಅವರು ಬಂಡಾಯವಾಗಿ ನಿಲ್ಲುವುದು ಅಸಾಧ್ಯವಾದ ಮಾತು. ಅವರು ಯಾವತ್ತೂ ಪಕ್ಷದ ಜೊತೆಗೆ ಇರಲಿದ್ದಾರೆ ಎಂದರು.

ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಲು ಯಾರು ಕಾರಣ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಲು ಯಾರೂ ಕಾರಣರಲ್ಲ. ಈ ಕುರಿತಂತೆ ಇಂದು ನಮ್ಮ ಪಕ್ಷದ ವರಿಷ್ಠರು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ವಿಶ್ವಾಸ ಇದೆ ಎಂದು ತಿಳಿಸಿದರು.